ಜಿಲ್ಲೆ

ಕುರಿಗಾಹಿಗಳಲ್ಲಿ ಮೌಢ್ಯ ಜೀವಂತ

Gadag


ಶಿವಕುಮಾರ ಶಶಿಮಠ ಗಜೇಂದ್ರಗಡ
ಕುರಿಗಳನ್ನು ಅತ್ಯಂತ ಪ್ರೀತಿಯಿಂದ ಜತನಮಾಡುವ ಕುರಿಗಾರರು ಅವುಗಳಿಗೆ ರೋಗ ಬಾರದಂತೆ ತಡೆಯಲು ಟಗರಿಗೆ ಹಿಂಸೆ ನೀಡುವ ವಿಲಕ್ಷಣ ಪದ್ಧತಿಯನ್ನು ಇನ್ನೂ ಕೈಬಿಟ್ಟಿಲ್ಲ. ಮೂಕ ಪ್ರಾಣಿಗಳು ಗೋಗರೆದು, ಯಮಯಾತನೆ ಅನುಭವಿಸಿ ಪ್ರಾಣ ಬಿಟ್ಟರೂ ಮೌಢ್ಯದ ಮರೆಯಲ್ಲಿ ಅವರ ಮನಸು ಕರಗುವುದೇ ಇಲ್ಲ.
ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ದೇಶದಿಂದ ಟಗರೊಂದನ್ನು ತಲೆ ಕೆಳಗೆ ಮಾಡಿ ಮರಕ್ಕೆ ನೇತು ಹಾಕಿ ಅಲ್ಲಿಂದ ಬೇರೆ ಪ್ರದೇಶಕ್ಕೆ ಸಂಚರಿಸುವ ಕುರಿಗಾರರು ವೈಜ್ಞಾನಿಕ ಯುಗದಲ್ಲೂ ಅನಿಷ್ಠ ಪದ್ಧತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಸಂಚಾರಿ ಕುರಿಗಾರರು ತಮ್ಮ ಬದುಕಿಗೆ ಆಧಾರವಾಗಿರುವ ಕುರಿಗಳಿಗೆ ಯಾವುದೇ ಸಾಂಕ್ರಾಮಿಕ ರೋಗ ತಗಲಬಾರದು ಎನ್ನುವ ಕಾರಣಕ್ಕಾಗಿ ಕುರಿ ಹಿಂಡಿನಲ್ಲಿರುವ ಟಗರನ್ನು ನಾಲ್ಕು ರಸ್ತೆಗಳು ಸೇರುವ ಜಾಗದ ಮಧ್ಯ ಭಾಗದಲ್ಲಿರುವ ಮರಕ್ಕೆ ಜೀವಂತವಾಗಿ ನೇತು ಹಾಕುತ್ತಾರೆ. ಎರಡು ಕಾಲುಗಳನ್ನು ಹಗ್ಗದಿಂದ ಕಟ್ಟಿ ತಲೆ ಕೆಳಗೆ ಮಾಡಿ ಗಿಡಕ್ಕೆ ನೇತು ಹಾಕುತ್ತಾರೆ. ಇಡೀ ದೇಹದ ಭಾರ ತಲೆಯ ಮೇಲೆ ಬೀಳುವುದರಿಂದ ಕುರಿಯ ಕಣ್ಣಿನಿಂದ ರಕ್ತ ಸೋರಲಾರಂಭಿಸುತ್ತದೆ. ನರಕಯಾತನೆ ಅನುಭವಿಸಿ ಕೆಲ ಗಂಟೆಗಳಲ್ಲಿ ಕೊನೆಯುಸಿರೆಳೆಯುತ್ತದೆ.
ಟಗರು ಪ್ರಾಣ ರಕ್ಷಣೆಗಾಗಿ ಗೋಗರೆಯುತ್ತಿದ್ದರೂ ಯಾರೊಬ್ಬರೂ ರಕ್ಷಣೆಗೆ ಮುಂದಾಗುವುದಿಲ್ಲ. ಅದರ ಮಾಂಸ ತಿನ್ನುವುದಿಲ್ಲ. ಒಂದು ವೇಳೆ ಯಾರಾದರೂ ಆ ಟಗರನ್ನು ರಕ್ಷಿಸಿದರೆ ಅಥವಾ ಮಾಂಸದ ಆಸೆಗೆ ಕುರಿಯನ್ನು ತೆಗೆದುಕೊಂಡು ಹೋದರೆ ಕುರಿಗಳಿಗೆ ಬರುವ ಬೇನೆ ರೋಗಗಳು ಮನುಷ್ಯನಿಗೆ ಬರುತ್ತದೆ ಎಂಬ ನಂಬಿಕೆ ಇದೆ.

ಮನುಷ್ಯನ ಆರೋಗ್ಯಕ್ಕೆ ಮಾರಕ
ಟಗರನ್ನು ನೇತು ಹಾಕುವುದರಿಂದ ಅದರ ರಕ್ತ ಕೆಳಗೆ ಬಿದ್ದು ನೊಣಗಳು ಮುತ್ತಿಕೊಳ್ಳುತ್ತವೆ. ಜತೆಗೆ ದುರ್ನಾತ ಬೀರುವುದರಿಂದ ಸುತ್ತ್ತನ ಹೊಲಗಳ ರೈತರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರಾಣಿಯ ಕಳೆಬರ ತಿಂಗಳು ಪರ್ಯಂತ ಇರುವುದರಿಂದ ಆ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತದೆ. ಕುರಿಗಾರರು ಹೀಗೆ ಮಾಡುವುದರಿಂದ ಮನುಷ್ಯರು ಹಾಗೂ ಇತರ ಪ್ರಾಣಿಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಾರೆ. ಸರ್ಕಾರ ಪಶು ಸಂಜೀವಿನಿ ಯೋಜನೆ ಜಾರಿಗೊಳಿಸಿದೆ. ಪ್ರಾಣಿಗೆ ತೊಂದರೆಯಾದರೆ ನೀವಿದ್ದ ಸ್ಥಳಕ್ಕೆ ಬಂದು ಕುರಿ ಹಾಗೂ ಜಾನುವಾರುಗಳಿಗೆ ಚಿಕಿತ್ಸೆ ಕೊಡಲಾಗುತ್ತದೆ. ಇಂತಹ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನು ಮುಂದಾದರೂ ಮೌಢ್ಯಕ್ಕೆ ಮಾರುಹೋಗುವುದನ್ನು ಬಿಡಬೇಕು ಎನ್ನುತ್ತಾರೆ ಸೂಡಿ ಗ್ರಾಮದ ರೈತ ಶಶಿಧರ ವಕ್ಕಲರ.

ಪ್ರತಿ ವರ್ಷವೂ ಕುರಿಗಳಿಗೆ ನೀಲಿ ನಾಲಗೆ ರೋಗ, ಕ್ಷಯ ರೋಗ, ಕಾಲು ಬೇನೆ ರೋಗ, ಕರಳು ಬೇನೆ, ಗಂಟಲು ಬೇನೆ, ಟಿಪಿಆರ್ ಮತ್ತಿತರ ಕಾಯಿಗಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಪ್ರಕತಿ ವಿಕೋಪಗಳು ಉಂಟಾದಾಗ ಕುರಿಗಳಿಗೆ ಕಾಯಿಲೆಗಳ ಪ್ರಮಾಣ ದುಪ್ಪಟ್ಟಾಗಬಹುದು. ಕೆಲವೊಮ್ಮೆ ಕ್ಷೀಣಿಸಲೂಬಹುದು. ಆದರೆ, ಪ್ರತಿವರ್ಷ ಕುರಿಗಳಿಗೆ ಕಾಯಿಲೆಗಳು ಮಾತ್ರ ಸರ್ವೆ ಸಾಮಾನ್ಯ. ಸಾಧ್ಯವಾದಷ್ಟು ಕುರಿಗಾರರು ನಿರ್ವಿುಸಿಕೊಂಡಿರುವ ಹಟ್ಟಿಯ ಸುತ್ತಲೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ರೋಗ ನಿಯಂತ್ರಣ ಸಾಧ್ಯ.| ಜಯಶ್ರೀ ಪಾಟೀಲ, ಪಶು ವೈದ್ಯಾಧಿಕಾರಿ-----------ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕುರಿಗಾರರು ಇಂತಹ ಕೃತ್ಯವೆಸಗುತ್ತಾರೆ. ಮೊದಲು ಗದಗ, ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಕುರಿಗಾರರು ಸಹ ಹೀಗೆ ಮಾಡುತ್ತಿದ್ದರು. ಆದರೆ, ಈಗ ಈ ಭಾಗದಲ್ಲಿ ಈ ಪದ್ಧತಿ ಕೈಬಿಡಲಾಗಿದೆ. ನಿಪ್ಪಾಣಿಯಲ್ಲಿ ಹೆಚ್ಚಾಗಿ ಸಂಚಾರಿ ಕುರಿಗಾರರಿದ್ದಾರೆ. ಕುರಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಾರೆ. ಸಂಚಾರ ಮಾಡುವಾಗ ಕುರಿಗಳಿಗೆ ರೋಗ-ರುಜಿನ ಬಂದರೆ ಹೇಗೆ? ಎಂಬ ಹೆದರಿಕೆಯಿಂದ ಹಾಗೂ ಕುರಿಗಳು ಸತ್ತರೆ ಅವರಿಗಾಗುವ ನಷ್ಟವನ್ನು ವಿಚಾರ ಮಾಡಿ ಹಳೆಯ ಸಂಪ್ರದಾಯವನ್ನು ಕೈಬಿಡುತ್ತಿಲ್ಲ.| ದೇವಪ್ಪ ಪೂಜಾರ, ಗೌಡಗೇರಿ ಗ್ರಾಮದ ಕುರಿಗಾಹಿ