ಜಿಲ್ಲೆ

ಕುರಿ, ಮೇಕೆಗಳ ತೂಕದ ವಂಚನೆಗೆ ಬ್ರೇಕ್! ವಿದ್ಯುನ್ಮಾನ ಯಂತ್ರ ಅಳವಡಿಕೆ

ಚಿಕ್ಕಬಳ್ಳಾಪುರ: ಇನ್ನು ಮುಂದೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕುರಿ, ಮೇಕೆಗಳ ಮಾರಾಟದ ಸಂದರ್ಭದಲ್ಲಿ ರೈತರಿಗೆ ತೂಕದಲ್ಲಾಗುತ್ತಿದ್ದ ವಂಚನೆಗೆ ಬ್ರೇಕ್ ಬೀಳಲಿದೆ.

ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಮಾರುಕಟ್ಟೆಯಲ್ಲಿ ಕೃಷಿ ಮಾರಾಟ ಇಲಾಖೆ, ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳ ಜೀವಂತ ಕುರಿ, ಮೇಕೆಯನ್ನು ನೇರವಾಗಿ ತೂಕ ಹಾಕುವ ವಿದ್ಯುನ್ಮಾನ ಯಂತ್ರ ಅಳವಡಿಸಿದ್ದು, ತೂಕದ ವಂಚನೆಗೆ ಬ್ರೇಕ್ ಬೀಳಲಿದೆ.ಈ ಹಿಂದೆ ದಲ್ಲಾಳಿ ಮತ್ತು ವ್ಯಾಪಾರಿಗಳು ಮಾಂಸ ಸಿಗುವ ಲೆಕ್ಕಾಚಾರ ಹಾಕಿ ಅಂದಾಜು ಬೆಲೆ ನಿಗದಿಪಡಿಸುತ್ತಿದ್ದರು. ಇಲ್ಲವೇ ಎರಡು ಕೈಯಲ್ಲಿ ಎತ್ತಿಕೊಂಡು ಅಂದಾಜಿನಲ್ಲಿ ತೂಕ ಹೇಳುತ್ತಿದ್ದರು. ಇದರಿಂದ ತೂಕದ ವ್ಯತ್ಯಾಸ, ಕಡಿಮೆ ಬೆಲೆ ನಿಗದಿ ಸೇರಿ ನಾನಾ ರೀತಿಯ ಲೆಕ್ಕದಲ್ಲಿ ರೈತರು ಮೋಸಕ್ಕೊಳಗಾಗುತ್ತಿದ್ದರು, ಇದನ್ನರಿತು ವಿದ್ಯುನ್ಮಾನ ಯಂತ್ರ ಅಳವಡಿಸಲಾಗಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದಿನಕ್ಕೆ 100 ರಿಂದ 150 ಕುರಿ, ಮೇಕೆಗಳು ಮಾರಾಟವಾಗುತ್ತವೆೆ. ಒಂದಕ್ಕೆ ಕನಿಷ್ಠ 9 ರಿಂದ ಗರಿಷ್ಠ 12 ಸಾವಿರ ರೂ.ಬೆಲೆ ನಿಗದಿಯಾಗುತ್ತದೆ. ಇದರ ನಡುವೆ ಒಂದು ಕುರಿಗೆ 1 ಸಾವಿರ ರೂ.ಕಡಿತಗೊಳಿಸಲಾಗುತ್ತದೆ. ಇದರಿಂದ ವ್ಯಾಪಾರಿ, ದಲ್ಲಾಳಿಗಳು ದಿನನಿತ್ಯ ಸಾವಿರಾರು ರೂ.ಲಾಭ ಪಡೆಯುತ್ತಿದ್ದರೆ, ತಿಂಗಳಾನುಗಟ್ಟಲೆ ಕಷ್ಟಪಟ್ಟು ಸಾಕುವ ರೈತರು ತಮಗರಿವಿಲ್ಲದಂತೆಯೇ ನಷ್ಟ ಅನುಭವಿಸುತ್ತಿದ್ದರು.ಆದರೆ ಯಂತ್ರ ಅಳವಡಿಸಿರುವುದರಿಂದ ಒಂದೊಂದು ಕುರಿ, ಮೇಕೆಯನ್ನು ತೂಕದ ಯಂತ್ರದಲ್ಲಿ ನಿಲ್ಲಿಸಿ, ಮಾಪನಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತದೆ. ನ್ಯಾಯಯುತ ಬೆಲೆಯೂ ರೈತರಿಗೆ ಸಿಗಲಿದ್ದು, ಯಂತ್ರದ ತೂಕಕ್ಕಾಗಿ ರೈತರು 5 ರೂ.ಶುಲ್ಕ ಪಾವತಿಸಬೇಕಾಗುತ್ತದೆ.

ಜಿಪಂ ಸಿಇಒ ಭೇಟಿ : ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನೂತನ ಯಂತ್ರವನ್ನು ಜಿಪಂ ಸಿಇಒ ಬಿ ಫೌಜೀಯಾ ತರನ್ನುಮ್ ಲೋಕಾರ್ಪಣೆ ಮಾಡಿದರು. ನಂತರ ಸ್ಥಳೀಯ ರೈತರೊಂದಿಗೆ ಸಮಸ್ಯೆಗಳ ಕುರಿತ ಚರ್ಚಿಸಿದರು. ಕೃಷಿ ಉತ್ಪನ್ನಗಳ ಮಾರಾಟದ ಕೇಂದ್ರವಾಗಿರುವ ಮಾರುಕಟ್ಟೆಗಳು ಸಮರ್ಪಕವಾಗಿ ಅಭಿವೃದ್ಧಿ ಹೊಂದಬೇಕು, ಇಲ್ಲದಿದ್ದಲ್ಲಿ ರೈತರು ತೊಂದರೆ ಅನುಭವಿಸಬೇಕಾಗುತ್ತದೆ, ಸರ್ಕಾರದ ಅನುದಾನದಲ್ಲಿ ಅಗತ್ಯ ಕೆಲಸಗಳನ್ನು ಕೈಗೊಂಡು ಸಕಾಲಕ್ಕೆ ಸವಲತ್ತುಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅವೈಜ್ಞಾನಿಕ ಬೆಲೆ, ಮಾರುಕಟ್ಟೆಯಲ್ಲಿ ಸವಲತ್ತುಗಳ ಕೊರತೆ, ನಿರೀಕ್ಷೆಯ ಅಭಿವೃದ್ಧಿ ಕೆಲಸಗಳ ಬಗ್ಗೆ ಹಲವರು ಗಮನ ಸೆಳೆದರು. ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಕೆ.ಎಸ್.ಕೃಷ್ಣಾರೆಡ್ಡಿ, ಎಚ್.ವಿ.ಗೋವಿಂದಸ್ವಾಮಿ, ರಾಜ್ಯ ಕುರಿ ಮತ್ತು ಮೇಕೆ ಸಾಕಾಣೆದಾರರ ಸಂಘದ ಅಧ್ಯಕ್ಷ ಬಳುವನಹಳ್ಳಿ ಸಿ.ವಿ.ಲೋಕೇಶ್ ಗೌಡ ಮತ್ತಿತರರು ಇದ್ದರು.