ಯಡ್ರಾಮಿ: ಕುರಳಗೇರಾ ಗ್ರಾಮದ ಹೊರವಲಯದಲ್ಲಿ ವಾರದ ಹಿಂದೆ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಹೊರಗಡೆ ತಿರುಗಾಡಲು ಭಯ ಪಡುತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಜಾನಹಳ್ಳ ಸುತ್ತಲಿನ ಹೊಲಗಳಲ್ಲಿ ಕೆಲ ಕುಟುಂಬಗಳು ಮನೆ ಮಾಡಿಕೊಂಡು ವಾಸಿಸುತ್ತಿವೆ. ಎಂಟು ದಿನಗಳಿಂದ ಸಾಕು ನಾಯಿಗಳು ಒಂದೊAದೆ ಕಣ್ಮರೆಯಾಗುತ್ತಿದ್ದವು. ಗುರುವಾರ ರಾತ್ರಿ ನಾಯಿಯೊಂದು ಬೊಗಳುವುದನ್ನು ಕೇಳಿ ಗುಡಿಸಲಿನಲ್ಲಿರುವ ವ್ಯಕ್ತಿ ಹೊರಗೆ ಬಂದು ನೋಡುವ ಹೊತ್ತಿಗೆ ಕಣ್ಮರೆಯಾಗಿದೆ. ಚಿರತೆಯೇ ನಾಯಿಯನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರಿಗೆ ಹೇಳಿದ್ದು, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಶುಕ್ರವಾರ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ಸಿದ್ದುಗೌಡ, ದಸ್ತು ಅರಣ್ಯಪಾಲಕ ಮಲ್ಲಿನಾಥ ಬಾಸಗಿ ಹಾಗೂ ಸಿಬ್ಬಂದಿ ಭೇಟಿ ಪರಿಶೀಲಿಸಿದ್ದಾರೆ. ಹೆಜ್ಜೆ ಗುರುತುಗಳನ್ನು ನೋಡಿ, ಚಿರತೆ ತಿರುಗಾಡಿರುವುದು ಖಚಿತ ಪಡೆಸಿದ್ದಾರೆ. ಬಳಿಕ ಪ್ರಾಣಿ ಸೆರೆಗಾಗಿ ಬೋನು ಅಳವಡಿಸಿದ್ದಾರೆ. ಹೊಲ-ಗದ್ದೆಗಳಿಗೆ ಒಬ್ಬರಾಗಿ ಓಡಾಡಬಾರದು, ಕೈಯಲ್ಲಿ ಬಡಿಗೆ, ಕೊಡಲಿ ಸೇರಿ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡು ತಿರುಗಾಡಿ ಎಂದು ಕರೆ ನೀಡಿದ್ದಾರೆ.
ಬೋನು ಅಳವಡಿಸಿ ಮೂರು ದಿನ ಕಳೆದರೂ ಚಿರತೆಯ ಸುಳಿವು ಸಿಕ್ಕಿಲ್ಲ. ಜಾನಹಳ್ಳ ಸುತ್ತ-ಮುತ್ತ ಗಿಡಗಂಟಿಗಳು ಬಹಳಷ್ಟಿವೆ. ಅಲ್ಲೇ ಪ್ರಾಣಿ ಅವಿತಿರಬಹುದು ಎಂದು ಜನರು ಹೇಳುತ್ತಿದ್ದಾರೆ. ಕುರಳಗೇರಾ ಸೇರಿ ಸುತ್ತಲಿನ ಹಳ್ಳಿಗಳ ಜನರು ಕೃಷಿ ಕೆಲಸದತ್ತ ಬರುವುದು ಬಿಟ್ಟಿದ್ದಾರೆ. ಕೂಡಲೇ ಚಿರತೆಯನ್ನು ಬಂಧಿಸಿ, ಭಯ ದೂರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.