ಹನೂರು: ಕುರಟ್ಟಿಹೊಸೂರು ಭಾಗದಲ್ಲಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಪಡೆಯಲು ತುಂಬಾ ತೊಂದರೆ ಅನುಭವಿಸುತ್ತಿದ್ದು, ಗ್ರಾಮಕ್ಕೆ ಪಿಯು ಕಾಲೇಜು ಅತ್ಯಗತ್ಯವಾಗಿದೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ತಿಳಿಸಿದರು.
ತಾಲೂಕಿನ ಕುರಟ್ಟಿ ಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಜತ ಮಹೋತ್ಸವದ ಅಂಗವಾಗಿ ಸೋಮವಾರ ಹಿರಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
25 ವರ್ಷದ ಹಿಂದೆ ಕುರಟ್ಟಿ ಹೊಸೂರು ಭಾಗದಲ್ಲಿ ಪ್ರೌಢಶಾಲೆ ಇರಲಿಲ್ಲ. ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕಾದರೆ ಮಹದೇಶ್ವರಬೆಟ್ಟ ಹಾಗೂ ರಾಮಾಪುರಕ್ಕೆ ತೆರಳಬೇಕಿತ್ತು. ಇದರಿಂದ ಕೆಲ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದರು. ಇದನ್ನು ಮನಗಂಡು ಗ್ರಾಮದ ಮುನಿಶೆಟ್ಟಿ ಕುಟುಂಬಸ್ಥರು ಅನಕ್ಷರಸ್ಥರಾಗಿದ್ದರೂ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಪ್ರೌಢಶಾಲೆ ತೆರೆಯಲು ಜಾಗ ದಾನ ನೀಡಿದರು. ಇದರ ಫಲವಾಗಿ ಈ ಭಾಗದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಇಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಈ ದಿಸೆಯಲ್ಲಿ ಶಿಕ್ಷಣ ಪಡೆದ ಗುರುಗಳಿಗೆ ಹಿರಿಯ ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವದಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಹನೂರು ಭಾಗದಲ್ಲಿ ಹಿಂದೆ ಪ್ರೌಢಶಾಲೆಗಳು ಇಲ್ಲದ ಪರಿಣಾಮ ಶೈಕ್ಷಣಿಕವಾಗಿ ತೀರಾ ಹಿಂದುಳಿದಿತ್ತು. ಈ ವೇಳೆ ಮಾಜಿ ಸಚಿವ ದಿ.ಎಚ್.ನಾಗಪ್ಪ ಅವರು ಶಿಕ್ಷಣಕ್ಕೆ ಅದರಲ್ಲೂ ಹೆಣ್ಣು ಮಕ್ಕಳ ಹೆಚ್ಚಿನ ಒತ್ತನ್ನು ನೀಡಿ ಶಾಲೆಗಳ ಸ್ಥಾಪನೆಗೆ ಶ್ರಮಿಸಿದ್ದರು. ಬಳಿಕ ಕಾಮಗೆರೆ, ಅಜ್ಜಿಪುರ ಹಾಗೂ ಬಂಡಳ್ಳಿಯಲ್ಲಿ ಜೆಎಸ್‌ಎಸ್ ಪ್ರೌಢಶಾಲೆಗಳು ಸ್ಥಾಪನೆಯಾದವು. ಇದರಿಂದ ವಿದ್ಯಾರ್ಥಿಗಳ ಪ್ರೌಢ ಶಿಕ್ಷಣಕ್ಕೆ ಅನುಕೂಲವಾಯಿತು. ಜತೆಗೆ ನನ್ನ ಅಧಿಕಾರಾವಧಿಯಲ್ಲಿ ಕುರಟ್ಟಿ ಹೊಸೂರು ಹಾಗೂ ತಮಿಳಿಗರೇ ಹೆಚ್ಚಿದ್ದ ಗಡಿ ಭಾಗವಾದ ಗೋಪಿನಾಥಂಗೆ ಪ್ರೌಢಶಾಲೆ ಮಂಜೂರಾಯಿತು. ಆದರೆ ಕುರಟ್ಟಿ ಹೊಸೂರು ಭಾಗದಲ್ಲಿ ಹತ್ತಾರು ಗ್ರಾಮಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ ಈ ಭಾಗಕ್ಕೆ ಪದವಿ ಪೂರ್ವ ಕಾಲೇಜು ಅನಿವಾರ್ಯವಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಡಿಜಿಟಲ್ ಗ್ರಂಥಾಲಯ ಅಗತ್ಯವಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಗ್ರಂಥಾಲಯ ತೆರೆದರೆ ವಿದ್ಯಾರ್ಥಿಗಳ ಜತೆಗೆ ಈ ಭಾಗದಲ್ಲಿ ಉದ್ಯೋಗವನ್ನು ಬಯಸುವ ಸ್ಪರ್ಧಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸ್ಮರಣೆ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಶಾಲೆಯಲ್ಲಿ 25 ವರ್ಷದ ಅವಧಿಯಲ್ಲಿ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು.ಬಿಇಒ ಶಿವರಾಜು, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ, ಎಸ್‌ಡಿಎಂಸಿ ಅಧ್ಯಕ್ಷ ನಟರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ನಿವೃತ್ತ ಶಿಕ್ಷಕ ಮುನಿಮಾದಶೆಟ್ಟಿ, ಸ್ಥಳ ದಾನಿ ನಂಜಮ್ಮ, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರು ಇದ್ದರು.