ಜಿಲ್ಲೆ

ಕುಮ್ಮಕ್ಕಿನಿಂದ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ

ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ದಬ್ಬಾಳಿಕೆ, ದೌರ್ಜನ್ಯ ನಡೆಸಿದ್ದಾರೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ನಡೆಸಿರುವ ಲಾಠಿ ಚಾರ್ಜ್ ಘಟನೆ ಕುರಿತು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಮಾನವ ಹಕ್ಕುಗಳ ಉಲ್ಲಂಸಿರುವ ಪೊಲೀಸರಿಗೆ ಹೈಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಧಟತನದಿಂದ ಮಾತನಾಡುತ್ತಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಅಸಂವಿಧಾನಿಕ ಎನ್ನುವು ಅವರ ಹೇಳಿಕೆಯೇ ಅಸಂವಿಧಾನಿಕವಾಗಿದೆ. ಮೀಸಲಾತಿ ನಮ್ಮ ಹಕ್ಕು, ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.

ಗುಂಡು ಪಾಟೀಲ, ಶಿವಾನಂದ ತಂಬಾಕಿ, ಶಿವಾನಂದ ಪಾಟೀಲ, ಈರಣ್ಣ ಬಿಸಿರೊಟ್ಟಿ, ಮಹಾಂತೇಶ ವಕ್ಕುಂದ ಇತರರಿದ್ದರು.

ಶಾಸಕರಿಗೆ ಜನರಿಂದ ತಕ್ಕ ಉತ್ತರ ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ತಮ್ಮ ಕ್ಷೇತ್ರಕ್ಕೆ ದೊರೆಯುವ ಅನುದಾನಕ್ಕೆ ಮುಖ್ಯಮಂತ್ರಿಗಳು ಕಡಿವಾಣ ಹಾಕುವರು ಎಂಬ ಭಯದಿಂದ ಪಂಚಮಸಾಲಿ ಸಮುದಾಯದ ಶಾಸಕರು ಅಧಿವೇಶನದ ಕಲಾಪದಲ್ಲಿ ಮೀಸಲಾತಿ ಬಗ್ಗೆ ಸಮುದಾಯದ ಪರ ಮಾತನಾಡಿಲ್ಲ.

ಮುಂದಿನ ದಿನಗಳಲ್ಲಿ ಈ ಕುರಿತು ಸಮುದಾಯದ ಜನರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪಂಚಮಸಾಲಿ ಶಾಸಕರ ಬಗ್ಗೆ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.