ಬಾಗಲಕೋಟೆ: ಬಿ.ವಿ.ವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸ್ತನ್ಯಪಾನವನ್ನು ಉತ್ತೇಜಿಸಲು ಕೈಗೊಳ್ಳಲಾದ ವಿಶೇಷ ಕಾರ್ಯಕ್ರಮಗಳು ಮತ್ತು ಯೋಜನೆಗಳಿಂದಾಗಿ ಆಸ್ಪತ್ರೆಗೆ “ಸ್ತನ್ಯಪಾನಸ್ನೇಹಿ ಆಸ್ಪತ್ರೆ” (Breastfeeding Friendly Hospetal) ಎಂದು ರಾಷ್ಟ್ರೀಯ ಮಾನ್ಯತಾ ಕೇಂದ್ರದಿಂದ ಮಾನ್ಯತೆ ದೊರೆತಿದೆ.
ಸ್ತನ್ಯಪಾನಸ್ನೇಹಿ ಆಸ್ಪತ್ರೆ ಯೋಜನೆಯಡಿಯಲ್ಲಿ (ಬಿ.ಎಫ್.ಎಚ್.ಐ) ದೆಹಲಿಯ ರಾಷ್ಟ್ರೀಯ ಮಾನ್ಯತಾ ಕೇಂದ್ರವು ಪರಿವೀಕ್ಷಣೆ (Inspection) ನಡೆಸಿ “*ಸ್ತನ್ಯಪಾನಸ್ನೇಹಿ ಮಾನ್ಯತೆ-ಗ್ರೇಡ್ 1" ಎಂದು ಪ್ರಮಾಣಪತ್ರ ನೀಡಿದೆ. ಕುಮಾರೇಶ್ವರ ಆಸ್ಪತ್ರೆಯು ಈ ಮಾನ್ಯತೆ ಪಡೆದ ರಾಜ್ಯದ ಎರಡನೇ ಮತ್ತು ಉತ್ತರ ಕರ್ನಾಟಕದ ಪ್ರಥಮ ಆಸ್ಪತ್ರೆ ಎನ್ನುವುದು ವಿಶೇಷವಾಗಿದೆ.
ಪ್ರಮಾಣಪತ್ರವನ್ನು ಸ್ವೀಕರಿಸಿ ಮಾತನಾಡಿದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ‘ಬಿ.ಎಫ್.ಎಚ್.ಐ ನಿಂದ ದೊರೆತ ಈ ಮಾನ್ಯತೆಯು ಕುಮಾರೇಶ್ವರ ಆಸ್ಪತ್ರೆಯ ಸೇವಾ ಗುಣಮಟ್ಟದ ಶ್ರೇಷ್ಠತೆಗೊಂದು ನಿದರ್ಶನವಾಗಿದೆ. ಮಕ್ಕಳಿಗೆ ತಾಯಿ ಮೊಲೆಹಾಲಿಗಿಂತ ಶ್ರೇಷ್ಠವಾದ ಆಹಾರ ಇನ್ನೊಂದಿಲ್ಲ. ಕುಮಾರೇಶ್ವರ ಆಸ್ಪತ್ರೆಯಲ್ಲಿ ಸ್ತನ್ಯಪಾನ ಕುರಿತು ತಾಯಂದಿರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸ್ತನ್ಯಪಾನ ಜಾಗೃತಿ ಕುರಿತಾದ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಲು ಈ ರಾಷ್ಟ್ರೀಯ ಮಾನ್ಯತೆಯಿಂದ ಪ್ರೇರಣೆ ಮತ್ತು ಸ್ಪೂರ್ತಿ ದೊರೆತಂತಾಗಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಚಿಕ್ಕಮಕ್ಕಳ ತಜ್ಞರಾದ ಡಾ.ಭುವನೇಶ್ವರಿ ಯಳಮಲಿ, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ.ಆಶಾಲತಾ ಮಲ್ಲಾಪೂರ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ಪಲ್ಲವಿ ಚರಂತಿಮಠ, ಡಾ.ನಾಗರತ್ನ ಕುಂಟೋಜಿ ಮತ್ತು ತಂಡದವರ ಅವಿರತ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಈ ಪ್ರಮಾಣೀಕರಣದ ಮಾನ್ಯತೆ ಆಸ್ಪತ್ರೆಗೆ ಪ್ರಾಪ್ತವಾಗಿದೆ. ಈ ವಿಶೇಷ ಸಾಧನೆಗಾಗಿ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ’ ಎಂದು ಹೇಳಿದರು.
ಈ ಸಂದರ್ಭ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಎಮ್. ಸಜ್ಜನ (ಬೇವೂರ), ಮೆಡಿಕಲ್ ಕಾಲೇಜ್ ಪ್ರಾಚಾರ್ಯರಾದ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕರಾದ ಡಾ.ಭುವನೇಶ್ವರಿ ಯಳಮಲಿ, ಡಾ.ಆಶಾಲತಾ ಮಲ್ಲಾಪೂರ, ಡಾ.ಅಶೋಕ ಬಡಕಲಿ, ಡಾ.ಸೊಲಬಣ್ಣವರ್ ಮತ್ತು ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದರು.