ಬಾಗಲಕೋಟೆ: ನಗರದ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಕೆನರಾ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಸುಮಾರು ೧೦.೫ ಲಕ್ಷ ರೂಪಾಯಿಗಳ ಮೌಲ್ಯದ ಜರ್ಮನ್ ದೇಶದ ಡ್ರ್ಯಾಗರ್ ಕಂಪನಿಯ ಅತ್ಯಾಧುನಿಕ “ಅರವಳಿಕೆ ಯಂತ್ರ”ವನ್ನು (ಅನಸ್ತೇಶಿಯಾ ವರ್ಕ್ಸ್ಟೇಷನ್) ಸಾಂಸ್ಥಿಕ (ಕಾರ್ಪೊರೇಟ್) ಸಾಮಾಜಿಕ ಜವಾಬ್ದಾರಿಯಡಿ ದೇಣಿಗೆಯಾಗಿ ನೀಡಲಾಯಿತು.
ಈ ಅತ್ಯಾಧುನಿಕ ಯಂತ್ರ ಶಸ್ತ್ರಚಿಕಿತ್ಸೆ ಸಂದರ್ಭ ರೋಗಿಗಳಿಗೆ ಅರವಳಿಕೆ ನೀಡಲು ಬಳಕೆಯಾಗುತ್ತದೆ.ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ವಿಭಾಗೀಯ ಮುಖ್ಯಸ್ಥ ಎಂ.ವಿಜಯಕುಮಾರ, ಬಾಗಲಕೋಟ ಶಾಖಾ ಮ್ಯಾನೇಜರ್ ಶೈಲಜಾ ಕೆ.ಆರ್, ಲೀಡ್ ಡಿಸ್ಟ್ರೀಕ್ಟ್ ಮ್ಯಾನೇಜರ್ ಮಧುಸೂದನ, ಸಹಾಯಕ ಮ್ಯಾನೇಜರ್ ರೆಝಿನಾಲ್ಡ್ ಅಮನ್ನಾ ಮತ್ತು ಸುನೀಲಕುಮಾರ.ಜಿ ಅವರು ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಅನಸ್ತೆಶಿಯಾ ವರ್ಕ್ಸ್ಟೇಷನ್ ಯಂತ್ರವನ್ನು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು.
ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ವೀರಣ್ಣ ಚರಂತಿಮಠ , ಕಾರ್ಪೊರೇಟ್ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ನೀಡುತ್ತಿರುವುದು ಅಭಿನಂದನೀಯ. ಸಮಾಜದ ಪ್ರಗತಿ ಎನ್ನುವುದು ಹೊಣೆಗಾರಿಕೆಯಾದಾಗ ಅಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೆನರಾ ಬ್ಯಾಂಕ್ ಕುಮಾರೇಶ್ವರ ಆಸ್ಪತ್ರೆಗೆ ಈ ಅತ್ಯಾಧುನಿಕ ವೈದ್ಯಕೀಯ ಉಪಕರಣವನ್ನು ದೇಣಿಯಾಗಿ ನೀಡಿ ತನ್ನ ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿಯನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿದೆ. ಬ್ಯಾಂಕ್‌ನ ಈ ನೆರವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಮತ್ತು ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ’ ಎಂದರು.
ಈ ಸಂದರ್ಭ ಬಿ.ವಿ.ವಿ.ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಶಿವಾನಂದ ಹುಲಕುಂದ, ಡಾ.ಶಿವಕುಮಾರ ಸೊಲಬಣ್ಣವರ್, ಡಾ.ಶ್ರೀರಾಮ ಕೋರಾ ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.