ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯಾವ ಮನಸ್ಥಿತಿಯಿಂದ ಬ್ರಾಹ್ಮಣ ಸಮುದಾಯದ ಕುರಿತು ಹೇಳಿಕೆ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಹೇಳಿಕೆಯನ್ನು ಯಾರು ಸಹ ತಪ್ಪಾಗಿ ಅರ್ಥೈಸಿಕೊಂಡಿಲ್ಲ, ಅವರು ನೀಡಿದ ಹೇಳಿಕೆಯೇ ತಪ್ಪಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಸಮುದಾಯದವರಿಗೂ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಅವಕಾಶವಿದೆ, ಅದಕ್ಕೆ ಬೇಕಾದ ನಾಯಕತ್ವವನ್ನು ರೂಪಿಸಿಕೊಳ್ಳಬೇಕಷ್ಟೆ. ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿಯಾಗಬಾರದು ಎಂಬ ರೀತಿಯಲ್ಲಿ ಕುಮಾ ರಸ್ವಾಮಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಾಂದರ್ಭಿಕ ಸುಳ್ಳುಗಳನ್ನೇ ಹೇಳಿಕೊಂಡೇ ಪಕ್ಷ ಕಟ್ಟುತ್ತೇವೆ ಎಂದು ಜೆಡಿಎಸ್ ಹೊರಟಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಂದರ್ಭಿಕ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇಂತಹವರು ಬಿಜೆಪಿ ಕುರಿತು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಎಂದು ಕರೆಯಲಾಗುತ್ತದೆ. ಆ ಪಕ್ಷವನ್ನು ಇದೀಗ ಅಪ್ಪ ಮಕ್ಕಳ ಪಕ್ಷದ ಜತೆಗೆ ಸೊಸೆಯಂದಿರು, ಮೊಮ್ಮಕ್ಕಳ ಪಕ್ಷ ಎಂದು ಕರೆಯುವುದು ಸೂಕ್ತ. ಜೆಡಿಎಸ್‌ನಲ್ಲಿ ಒಂದು ಕುಟುಂಬದ ಎಲ್ಲರು ರಾಜಕಾರಣಕ್ಕೆ ಬಂದಿದ್ದು, ಇನ್ನು ಮರಿ ಮೊಮ್ಮಕ್ಕಳು ರಾಜಕಾರಣಕ್ಕೆ ಬರುವುದು ಮಾತ್ರ ಬಾಕಿ ಇದೆ. ಜೆಡಿಎಸ್ ಒಂದು ಪಕ್ಷವೇ ಅಲ್ಲ, ಅದೊಂದು ಕೌಟುಂಬಿಕ ಪಕ್ಷ ಎಂದು ಟೀಕಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಜಿಲ್ಲೆಯಲ್ಲಿ ಅಭೂತಪೂರ್ವವಾದ ತಯಾರಿ ನಡೆಸಿದೆ. ಪಕ್ಷ ಕೈಗೊಂಡ ಭೂತ್ ವಿಜಯ, ವಿಜಯ ಸಂಕಲ್ಪ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉತ್ತಮ ಯೋಜನೆಗಳ ಕುರಿತು ಜನರು ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವ ಭರವಸೆ ಹೊಂದಿದ್ದೇವೆ ಎಂದರು.
ಜಿಲ್ಲಾ ಸಹ ವಕ್ತಾರಾದ ಡಾ. ಕೆ .ವಸಂತ್ ಕುಮಾರ್ ಮಾತನಾಡಿ, ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಈ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ವಕ್ತಾರರ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಮ್ಮ ಪಕ್ಷದ ಬಗ್ಗೆ ಅವರು ಮಾತನಾಡುವ ಬದಲು ಅವರ ಪಕ್ಷ ಸಂಘಟನೆಯ ಕಡೆಗೆ ಗಮನ ಹರಿಸಲಿ ಎಂದು ಹೇಳಿದರು.
ಬಿಜೆಪಿ ಯಾವುದೇ ಸಮುದಾಯದವನ್ನು ಕಡೆಗಣಿಸಿಲ್ಲ. ಆದರೆ, ಈ ವಿಚಾರದಲ್ಲಿ ಕುಮಾರಸ್ವಾಮಿ ಗೊಂದಲ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಬಿಜೆಪಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿಲ್ಲ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಲಿಂಗಾಯತ ಸಮುದಾಯದವರಿಗೆ ಸೇರಿದವರಾಗಿದ್ದಾರೆ. ಜಾತಿ ವಿಷಯ ಎತ್ತಿಕೊಂಡು ಜನರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ಕುಮಾರಸ್ವಾಮಿ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಸಹ ಮಾಧ್ಯಮ ಸಂಚಾಲಕ ಗಿರೀಶ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್ ಇದ್ದರು.