ಜಿಲ್ಲೆ

ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ: ಇಬ್ರಾಹಿಂ

ಹುಬ್ಬಳ್ಳಿ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ. ದಲಿತ ಅಥವಾ ಮುಸ್ಲಿಂರನ್ನು ಮುಖ್ಯಮಂತ್ರಿಯನ್ನಾಗಿಸುವ ಇಚ್ಛೆ ಕುಮಾರಸ್ವಾಮಿಯವರಿಗೆ ಇದೆಯಾದರೂ, ಅದು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ, ಮುಸ್ಲಿಂರು ಅಥವಾ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬಹುದು. ಸ್ವತಃ ಕುಮಾರಸ್ವಾಮಿಯವರಿಗೂ ಮುಖ್ಯಮಂತ್ರಿ ಸ್ಥಾನ ಬೇಡ ಎನ್ನುವ ಅಧಿಕಾರ ಇಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೆಲ್ಲ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಎಂದು ತೀರ್ವನಿಸಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೇಸೇತರ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ. ಹಾಗೇನಾದರೂ ಆದರೆ, ಕುಮಾರಸ್ವಾಮಿ ಅವರು ಕೇಂದ್ರ ರಾಜಕೀಯಕ್ಕೆ ಕಾಲಿಡಬಹುದು. ಅಲ್ಲಿ ಪ್ರಧಾನಿ ಅಥವಾ ಇತರ ಸ್ಥಾನಮಾನಗಳನ್ನು ಅಲಂಕರಿಸಬಹುದು. ಕುಮಾರಸ್ವಾಮಿ ಅವರ ಗೃಹಬಲ ನೋಡಿದರೆ ಅವರು ಕೇಂದ್ರದ ರಾಜಕೀಯಕ್ಕೆ ಹೋಗುವ ಸಾಧ್ಯತೆ ಹೆಚ್ಚು. ಅಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ದಲಿತ ಅಥವಾ ಮುಸ್ಲಿಂ ಮುಖ್ಯಮಂತ್ರಿ ಬಗ್ಗೆ ವಿಚಾರ ಮಾಡಬಹುದು ಎಂದು ಹೇಳಿದರು.

ಡಿ. 18ರ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಹಾಲಿ ಹಾಗೂ ಮಾಜಿ ಶಾಸಕರು ಜೆಡಿಎಸ್ ಸೇರಲಿದ್ದಾರೆ. ರಮೇಶ ಜಾರಕಿಹೊಳಿ ಅವರು ಈಗಾಗಲೇ ಕುಮಾರಸ್ವಾಮಿ ಅವರೊಂದಿಗೆ ರ್ಚಚಿಸಿದ್ದಾರೆ. ಜಾರಕಿಹೊಳಿ ಕುಟುಂಬದ ಎಷ್ಟು ಜನ ಜೆಡಿಎಸ್​ಗೆ ಬರುತ್ತಾರೆ ಎಂಬುದು ಗೊತ್ತಿಲ್ಲ ಎಂದರು.

ಬಿಜೆಪಿ ಸೋಲುವ ಭಯದಿಂದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯುವ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ನಡೆಯುವ ಅಕ್ರಮಗಳನ್ನು ಬೆಳಕಿಗೆ ತರುವುದಕ್ಕಾಗಿ ಬೆಂಗಳೂರಿನಲ್ಲಿ ವಾರ್ ರೂಂ ಸಿದ್ಧಪಡಿಸಿದ್ದೇವೆ. ಚುನಾವಣೆಗೆ ಮುಂಚೆಯೇ ಅಕ್ರಮಗಳನ್ನು ಪತ್ತೆ ಹಚ್ಚಿ ಚುನಾವಣೆ ಆಯೋಗಕ್ಕೆ ಹಾಗೂ ನ್ಯಾಯಾಲಯಕ್ಕೆ ನೀಡುತ್ತೇವೆ ಎಂದು ಹೇಳಿದರು.

ಜೆಡಿಎಸ್​ನಲ್ಲಿ ಚುನಾವಣೆ ಟಿಕೆಟ್​ಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ನಾವು ಪಾರ್ಟಿಫಂಡ್ ಕೊಡುವುದಿಲ್ಲ. ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ಚುನಾವಣೆ ಎದುರಿಸಬೇಕು ಎಂದು ತಿಳಿಸಿದರು.

ಜೆಡಿಎಸ್ ಮುಖಂಡರಾದ ಗುರುರಾಜ ಹುಣಸಿಮರದ ಪ್ರಕಾಶ ಅಂಗಡಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಕೋಟ್

ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ನನ್ನ ಹೆಸರಿನಲ್ಲೇ ಸಿಎಂ ಇದೆ. ನಾನು ಯಾವುದೇ ಸ್ಥಾನಗಳನ್ನು ನಿರೀಕ್ಷಿಸಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ.

- ಸಿ.ಎಂ. ಇಬ್ರಾಹಿಂ