ಜಿಲ್ಲೆ

ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದೇ ನಮ್ಮ ಸಂಕಲ್ಪ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಕರೆ ನೀಡಿದರು.

ನಗರದಲ್ಲಿ ಸೋಮವಾರ ಜಿಲ್ಲಾ ಮತ್ತು ತಾಲೂಕು ಜೆಡಿಎಸ್ ನೂತನ ಕಚೇರಿ ಉದ್ಘಾಟನೆ ಮತ್ತು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈಗಲೂ ಕುಮಾರಸ್ವಾಮಿ ಪರ ಜನರ ಒಲವಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಕೃಷಿಸಾಲ ಮನ್ನಾ, ಪ್ರೋತ್ಸಾಹಧನ ವಿತರಣೆ, ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆ ಸೇರಿ ಹಲವು ಕೊಡುಗೆಗಳ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಕಡೆಗಣಿಸಿರುವುದರಿಂದ ಪ್ರಾದೇಶಿಕ ಪಕ್ಷಕ್ಕೆ ವ್ಯಾಪಕ ಬೆಂಬಲ ಸಿಗುತ್ತಿದೆ, ಇದನ್ನೇ ಅಸವಾಗಿಸಿಕೊಂಡು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಬೇಕಾಗಿದೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಜಿಲ್ಲಾ ಸಮಾವೇಶ, ಸಭೆ ಮತ್ತು ಪ್ರವಾಸಗಳ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಈ ಭಾಗದಲ್ಲೂ ಪಕ್ಷದ ಪ್ರಾಬಲ್ಯ ವೃದ್ಧಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು.

ಕರೊನಾ ಸೋಂಕು ಮತ್ತು ಲಾಕ್‌ಡೌನ್ ನಡುವೆಯೂ ಆಂತರಿಕವಾಗಿ ಪಕ್ಷದ ಚಟುವಟಿಕೆ ಚುರುಕಿನಿಂದ ನಡೆದಿವೆ. ಯಾವುದೇ ಕಾರಣಕ್ಕೂ ಪಕ್ಷ ಈ ಭಾಗದಲ್ಲಿ ನಿಷ್ಕ್ರಿಯವಾಗಿಲ್ಲ. ಮುಂಬರುವ ದಿನಗಳಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಘಟನಾತ್ಮಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಅಧ್ಯಕ್ಷ ಕೆ.ಎಂ.ಮುನೇಗೌಡ ಹೇಳಿದರು.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆ ಮತ್ತು ಜಕ್ಕಲಮಡು ಜಲಾಶಯ ವಿವಾದ ಇತ್ಯರ್ಥದ ಪ್ರಮುಖ ರೂವಾರಿ ಕುಮಾರಸ್ವಾಮಿ. ರಾಮನಗರದ ಮಾದರಿಯಲ್ಲಿ ಈ ಜಿಲ್ಲೆಯ ಹಿತ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ಹೊಂದಿದ್ದಾರೆ ಎನ್ನುವ ಮೂಲಕ ಚುನಾವಣಾ ವೀಕ್ಷಕ ಅಬ್ಬಾಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು.

ನಗರಸಭೆ ಉಪಾಧ್ಯಕ್ಷೆ ವೀಣಾ ರಾಮು, ಸದಸ್ಯ ಆರ್.ಮಟಮಪ್ಪ, ಮಾಜಿ ಸದಸ್ಯರಾದ ಕಿಸಾನ್ ಕೃಷ್ಣಪ್ಪ, ಶ್ರೀನಿವಾಸ್, ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ಮುನಿಯಪ್ಪ ಮತ್ತಿತರರು ಇದ್ದರು.