ಹೆಗ್ಗೋಡಿನ ನೀನಾಸಂನಲ್ಲಿ ಆಯೋಜಿಸಿರುವ ಕಲೆಗಳ ಸಂಗಡ ಮಾತುಕತೆ ಶಿಬಿರದಲ್ಲಿ ಮಂಜು ಕೊಡಗು ನಿರ್ದೇಶನದಲ್ಲಿ ಪ್ರದರ್ಶನಗೊಂಡ ‘ಮೀಡಿಯಾ’ ನಾಟಕದ ದೃಶ್ಯ. 
ಜಿಲ್ಲೆ

ಕುಮಾರವ್ಯಾಸನದು ಅನುವಾದಕ್ಕೆ ನಿಲುಕದ ಕಾವ್ಯ

ಸಾಗರ: ಕುಮಾರವ್ಯಾಸನ ಕಾವ್ಯದಲ್ಲಿನ ಸೃಜನಶೀಲತೆ ಅನುವಾದಕ್ಕೆ ಮೀರಿದ್ದು. ಕೆಲವೊಮ್ಮೆ ಅನುವಾದಕ್ಕೆ ನಿಲುಕುವುದಿಲ್ಲ. ಕವಿಯ ಪ್ರತಿ ಪದ್ಯದಲ್ಲೂ ದರ್ಶನದ ಛಾಯೆ ದಟ್ಟವಾಗಿ ನಿಲ್ಲುತ್ತದೆ ಎಂದು ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಹೇಳಿದರು. ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ನೀನಾಸಂ ಆಯೋಜಿಸಿರುವ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದ ಅಂಗವಾಗಿ ನಡೆದ ಕುಮಾರವ್ಯಾಸ ಭಾರತ: ಪಠ್ಯ ಮತ್ತು ಅನುವಾದ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು. ಕನ್ನಡದ ಕಾವ್ಯ ಚರಿತ್ರೆಯ ದೃಷ್ಟಿಯಿಂದ ಕುಮಾರವ್ಯಾಸ ಭಾರತ ಅತ್ಯಂತ ಪ್ರಮುಖವಾದುದು. ಇದರಲ್ಲಿರುವ 8,500 ಪದ್ಯಗಳಲ್ಲಿ 2,500 ಮಾತ್ರ ಆಂಗ್ಲಭಾಷೆಗೆ ಅನುವಾದಗೊಂಡಿದೆ. ಹಳೆಗನ್ನಡದ ಲಯವನ್ನು ಆಂಗ್ಲಭಾಷೆಗೆ ದಾಟಿಸುವಲ್ಲಿ ಅನುವಾದಕರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅದು ಇನ್ನೂ ಸಂಪೂರ್ಣ ಸಾಧ್ಯವಾಗಿಲ್ಲ ಎಂದರು. ಕಥಾ ಪ್ರಸ್ತುತಿ- ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ತಮಿಳು ಲೇಖಕ ಬಿ.ಜಯಮೋಹನ್, ಸಾಮಾಜಿಕ ಜಾಲತಾಣವು ಧ್ವನಿಗಳನ್ನು ಹತ್ತಿಕ್ಕುವ ಸಾಧನವಾಗಿ ಬಳಕೆಯಾಗುತ್ತಿದೆ. ಬಂಡವಾಳ, ಅಕಾರ, ಉಪಭೋಗ ಸಂಸ್ಕೃತಿ ನಮ್ಮ ಉದಾತ್ತ ಚಿಂತನೆಗಳನ್ನು ನಿಯಂತ್ರಿಸುವ ಪ್ರಯತ್ನವನ್ನು ಪ್ರಬಲವಾಗಿ ಮಾಡುತ್ತಿವೆ. ಶಿಕ್ಷಣ ಪದ್ಧತಿ ಸಿದ್ಧ ಮಾದರಿಯ ವಿಚಾರಗಳನ್ನೇ ಒಳಗೊಂಡಿದ್ದು, ಹೊಸತನಕ್ಕೆ ತೆರೆದುಕೊಳ್ಳುತ್ತಿಲ್ಲ ಎಂಬುದನ್ನು ಬಹುಮುಖ್ಯವಾಗಿ ನಾವು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು. ಇಂದಿನ ರಾಜಕಾರಣ, ಶಿಕ್ಷಣ ಕ್ಷೇತ್ರದಲ್ಲಿನ ಯಜಮಾನಿಕೆಯ ಗುಣಕ್ಕೆ ಯುವ ತಲೆಮಾರು ಪ್ರತಿರೋಧ ಒಡ್ಡಬೇಕು. ಯಾವುದೇ ಒಂದು ವಿಷಯದ ಸಂಪೂರ್ಣ ಪರ ಮತ್ತು ವಿರೋಧದ ನಡುವೆ ಇರುವ ನೆಲೆಗಳನ್ನು ಯುವ ಸಮುದಾಯ ಅನ್ವೇಷಿಸಿ ವಿಶ್ಲೇಷಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನೀನಾಸಂ ಅಧ್ಯಕ್ಷ ಸಿದ್ಧಾರ್ಥ, ಕೆ.ವಿ.ಅಕ್ಷರ, ಟಿ.ಪಿ.ಅಶೋಕ್, ಯಶವಂತ್ ಜಾಧವ್ ಇತರರಿದ್ದರು.

ಕಾವ್ಯದ ಲೋಕವನ್ನು ಪ್ರವೇಶಿಸುತ್ತಲೇ ಅದು ಯಾವ ಸಾಂಸ್ಕೃತಿಕ ನೆನಪುಗಳನ್ನು ಹೊತ್ತು ತಂದಿದೆ ಎಂಬುದರ ಪರಿಶೀಲನೆ ಮಾಡಬೇಕಾದ ಸವಾಲು ಕುಮಾರವ್ಯಾಸನ ಕಾವ್ಯವನ್ನು ಅನುವಾದಿಸುವಾಗ ಎದುರಾಗಲಿದೆ. ಈ ಸವಾಲನ್ನು ಮೀರಿದಾಗ ಮಾತ್ರ ಅನುವಾದ ಸಶಕ್ತ ಅನಿಸುತ್ತದೆ. ಇಲ್ಲವಾದಲ್ಲಿ ಅದರ ಮೂಲ ಸ್ವರೂಪವನ್ನು ಅನುವಾದದಲ್ಲಿ ನೀಡಲು ಸಾಧ್ಯವಿಲ್ಲ. ಪ್ರೊ.ರಾಜೇಂದ್ರ ಚೆನ್ನಿ, ವಿಮರ್ಶಕ