ಮಂಜುನಾಥ ಟಿ.ಭೋವಿ ಮೈಸೂರು
ನಗರದ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲಿ ಊಟಿ ಮಾದರಿಯಲ್ಲಿ ವರ್ಷವಿಡೀ ಫಲಪುಷ್ಟ ಪ್ರದರ್ಶನ ಆಯೋಜನೆ ಮಾಡಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಕೂಗು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕಿವಿಗೊಡುವ ಮೂಲಕ ಇದನ್ನು ಸಾಕಾರಗೊಳಿಸಬೇಕಾಗಿದೆ.
ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ಮೈಸೂರಿಗೆ ಮತ್ತೊಂದು ಪ್ರೇಕ್ಷಣೀಯ ತಾಣ ದೊರೆಯಲಿದ್ದು, ಇದರಿಂದ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಪ್ರವಾಸೋದ್ಯಮಕ್ಕೂ ವರದಾನವಾಗಲಿದೆ.
ಹೊಸ ಪ್ರವಾಸಿ ತಾಣ ಇಲ್ಲ: ಅರಮನೆ ನಗರಿ ಮೈಸೂರು ಪ್ರವಾಸಿಗರ ನೆಚ್ಚಿನ ಊರು. ಇಲ್ಲಿಗೆ ದೇಶ-ವಿದೇಶಗಳಿಂದ ವರ್ಷಕ್ಕೆ ಅಂದಾಜು 35 ರಿಂದ 40 ಲಕ್ಷ ಪ್ರವಾಸಿಗರು ಬಂದು ಹೋಗುತ್ತಾರೆ. ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿಬೆಟ್ಟ ಹೊರತುಪಡಿಸಿ ಹೊಸ ಪ್ರವಾಸಿ ತಾಣಗಳು ಕಾಣಸಿಗುವುದಿಲ್ಲ. ಹೀಗಾಗಿ, ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಟ ಪ್ರದರ್ಶನ ಆಯೋಜನೆಯ ಮೂಲಕ ವರ್ಷವಿಡೀ ಚಟುವಟಿಕೆ ಇರುವಂತೆ ಕಾಯ್ದುಕೊಳ್ಳಬೇಕಿದೆ.
ಬೊಟಾನಿಕಲ್ ಗಾರ್ಡನ್ ಮಾಡಿ:
ನಗರದಲ್ಲಿ ಅತ್ಯುತ್ತಮವಾದ ಉದ್ಯಾನ ಇಲ್ಲ. ತಮಿಳುನಾಡಿನ ಊಟಿಯ ಹೆಸರಾಂತ ಪ್ರವಾಸಿ ತಾಣವಾಗಿರುವ ಜೈವಿಕ ಉದ್ಯಾನದ ಮಾದರಿಯಲ್ಲಿ ಚಾಮುಂಡಿಬೆಟ್ಟದ ತಪ್ಪಲಿನ ರೇಸ್‌ಕೋರ್ಸ್ ಮೈದಾನದಲ್ಲಿ ಬಟಾನಿಕಲ್ ಗಾರ್ಡನ್ ರೂಪಿಸಬೇಕೆಂಬ ಹಲವು ದಶಕಗಳ ಕನಸು ನನಸಾಗುವ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ. ಆದ್ದರಿಂದ ಮೃಗಾಲಯ, ಅರಮನೆ ಅಕ್ಕಪಕ್ಕದಲ್ಲಿರುವ ಈ ಪಾರ್ಕ್‌ನಲ್ಲಿ ಇದಕ್ಕೆ ಹೇಳಿ ಮಾಡಿಸಿದಂಥ ಜಾಗವಾಗಿದ್ದು, ಈ ಪಾರ್ಕ್‌ನಲ್ಲಿ ಬಟಾನಿಕಲ್ ಗಾರ್ಡನ್ ಅನುಷ್ಠಾನಗೊಳಿಸಬಹುದು. ಈ ಬಗ್ಗೆ ಯೋಚನೆ ಮಾಡಬೇಕಿದೆ.
ತೋಟಗಾರಿಕಾ ಉದ್ಯಾನ ರೂಪಿಸಿ:
ಊಟಿಯಲ್ಲಿ ರಾಜ್ಯ ತೋಟಗಾರಿಕಾ ಇಲಾಖೆ ನಿರ್ಮಿಸಿರುವ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನ ಜನಾಕರ್ಷಣೆಯ ತಾಣವಾಗಿ ಖ್ಯಾತಿ ಪಡೆದಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸುಂದರ, ಅಂದದ ತೋಟಗಾರಿಕಾ ಉದ್ಯಾನವನ್ನು ನಿರ್ಮಿಸಬಹುದಾಗಿದೆ. ಈ ರೀತಿ ಪರಿಸರ ಸ್ನೇಹಿ ಯೋಜನೆ ಮೂಲಕ ಪ್ರವಾಸಿಗರನ್ನು ವರ್ಷದ 365 ದಿನವೂ ಆಕರ್ಷಿಸಬಹುದು. ಆಗ ಪ್ರವಾಸೋದ್ಯಮಕ್ಕೂ ಅನುಕೂಲ, ತೋಟಗಾರಿಕೆ ಇಲಾಖೆಗೂ ಆದಾಯ ಹರಿದು ಬರಲಿದೆ.
ಇದು ನಿರುಪಯುಕ್ತ: ಕುಪ್ಪಣ್ಣ ಉದ್ಯಾನ ವರ್ಷಕ್ಕೆ ಒಮ್ಮೆ ಮಾತ್ರ ಬಳಕೆ ಆಗುತ್ತದೆ. ದಸರಾ ಸಂದರ್ಭದಲ್ಲಿ ಫಲಪುಷ್ಟ ಪ್ರದರ್ಶನ ಮಾತ್ರ ಇಲ್ಲಿ ನಡೆಯುತ್ತದೆ. ಉಳಿದ ದಿನಗಳಲ್ಲಿ ಜನ ಬಳಕೆಗೆ ಇಲ್ಲದೆ ನಿರುಪಯುಕ್ತವಾಗಿ ಇರುತ್ತದೆ. ಈ ಕಡೆ ಪ್ರವಾಸಿಗರು ತಿರುಗಿಯೂ ನೋಡಲ್ಲ. ಆದ್ದರಿಂದ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.
ವಾಕಿಂಗ್‌ಗೂ ಬಳಕೆ ಆಗಲ್ಲ:
ಈ ಉದ್ಯಾನಕ್ಕೆ ದಿನ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ ಎಂಬುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ನಿತ್ಯ ಬೆಳಗ್ಗೆ 6ರಿಂದ 9, ಸಂಜೆ 5ರಿಂದ 7 ಗಂಟೆವರೆಗೆ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ. ಆದ್ಯಾಗಿಯೂ ಯಾರೂ ಇಲ್ಲಿಗೆ ಭೇಟಿ ನೀಡಲ್ಲ. ವಾಕಿಂಗ್‌ಗೂ ಉಪಯೋಗ ಮಾಡಿಕೊಳ್ಳಲ್ಲ. ಸಸ್ಯ ಸಂತೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 7ವರೆಗೂ ಸಸ್ಯ ಖರೀದಿಸಬಹುದು. ಹೂ, ಹಣ್ಣು, ಟೆರೆಸ್ ಗಾರ್ಡನ್, ಕಿಚನ್ ಗಾರ್ಡನ್ ಬಳಸುವ ಗಿಡಗಳು ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದೆ. ಪ್ರಚಾರದ ಕೊರತೆಯಿಂದ ಜನರಿಂದ ಪ್ರತಿಕ್ರಿಯೆ ಇಲ್ಲವಾಗಿದೆ.
ಕಾಯಕಲ್ಪ ನೀಡಿ:
7 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಗಾಜಿನ ಮನೆ ನಿರ್ಮಿಸಲಾಗಿದೆ. ರಾಜ್ಯದಲ್ಲಿರುವ 3ನೇ ಗ್ಲಾಸ್ ಹೌಸ್ ಎಂಬ ಹಿರಿಮೆ ಇದಕ್ಕೆ ಇದೆ. ಆದರೆ, ದಸರಾ ಫಲಪುಷ್ಟ ಪ್ರದರ್ಶನದಲ್ಲಿ ಹೊರತು ಪಡಿಸಿದರೆ ಇದೂ ಬಳಕೆಯಾಗಲ್ಲ.
ಶೌಚಗೃಹ, ವಾಕಿಂಗ್ ಪಾತ್ ನಿರ್ಮಾಣ, ಲೈಟಿಂಗ್ಸ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇಲ್ಲಿಲ್ಲ. ದಸರಾ ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕ ವ್ಯವಸ್ಥೆಯನ್ನು ಅರೆಬರೆಯಾಗಿ ಮಾಡಲಾಗುತ್ತದೆ. ಬಳಿಕ ಯಥಾಸ್ಥಿತಿ ಮುಂದುವರಿಯುತ್ತದೆ. ಈ ಕೊರತೆಯಿಂದಾಗಿ ದಸರಾ ಫಲಪುಷ್ಟ ಪ್ರದರ್ಶನವನ್ನು ಸರಿಯಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ಪಾದಚಾರಿ ಮಾರ್ಗ ಕೆಸರುಮಯವಾಗುತ್ತದೆ. ಹುಲ್ಲುಹಾಸು ಹದಗೆಟ್ಟಿರುತ್ತದೆ. ಇಂಥ ಅವ್ಯವಸ್ಥೆ ನಡುವೆಯೂ ಫ್ಲವರ್ ಷೋ ಅನ್ನು ಪ್ರತಿವರ್ಷ ಮಾಡಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಶಾಶ್ವತವಾಗಿ ಕಾಯಕಲ್ಪ ನೀಡಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸವೇ ಸರಿ.
ಸಂಗೀತ ಕಾರಂಜಿ ಕೇಳುವವರಿಲ್ಲ
55 ಲಕ್ಷ ರೂ. ವೆಚ್ಚದಲ್ಲಿ 2012ರಲ್ಲಿ ನಿರ್ಮಿಸಿರುವ ‘ಸಂಗೀತ ಕಾರಂಜಿ’ ನಿಷ್ಪ್ರಯೋಜಕವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7ರಿಂದ 8ರ ವರೆಗೆ ನಡೆಯುವ ಈ ಸಂಗೀತ ಕಾರಂಜಿಯನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಬರಲ್ಲ. ಕೆಆರ್‌ಎಸ್ ಉದ್ಯಾನ ಹಾಗೂ ಮಡಿಕೇರಿಯ ರಾಜಾಸೀಟ್‌ನಲ್ಲಿರುವ ಸಂಗೀತ ಕಾರಂಜಿಯ ಮೂರು ಪಟ್ಟು ದೊಡ್ಡ ಕಾರಂಜಿ ಇದಾಗಿದ್ದು, ಪ್ರಚಾರದ ಕೊರತೆ ಮತ್ತು ಅಸಮರ್ಪಕ ನಿರ್ವಹಣೆಯಿಂದ ಇದು ಇದ್ದರೂ ಇಲ್ಲದಂತಾಗಿದೆ.
ಫ್ಲವರ್ ಷೋಗೆ 6 ಲಕ್ಷ ಜನರ ಭೇಟಿ
ಸೆ.26ರಿಂದ ಅ.5ರವರೆಗೆ ನಡೆದ ದಸರಾ ಫಲಪುಷ್ಪ ಪ್ರದರ್ಶನಕ್ಕೆ 6 ಲಕ್ಷ ಜನರು ಭೇಟಿ ನೀಡಿದ್ದಾರೆ. ಪ್ರವೇಶ ಟಿಕೆಟ್ ಗುತ್ತಿಗೆಯಿಂದ ತೋಟಗಾರಿಕೆ ಇಲಾಖೆಗೆ 1 ಕೋಟಿ ರೂ. ಆದಾಯ ಬಂದಿದೆ. ಇಲ್ಲಿ ವರ್ಷವಿಡೀ ಚಟುವಟಿಕೆಗಳು ನಡೆಸಿದರೆ ದೊಡ್ಡ ಮಟ್ಟದ ಆದಾಯ ಹರಿದು ಬರಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ.
ವರ್ಷವಿಡೀ ಫಲಪುಷ್ಟ ಪ್ರದರ್ಶನ ಆಯೋಜನೆ ಕಷ್ಟಕರವಾಗಲಿದೆ. ಆದರೆ, ನಿರಂತರವಾಗಿ ಬೇರೆ ಚಟುವಟಿಕೆಗಳನ್ನು ನಡೆಸಬಹುದು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆ ರೂಪಿಸಲಾಗುವುದು.ಕೆ.ರುದ್ರೇಶ್ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ
ಕುಪ್ಪಣ್ಣ ಉದ್ಯಾನದಲ್ಲಿ ಶಾಶ್ವತವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಬೇಕು. ಇದಕ್ಕೆ ಇದು ಸೂಕ್ತ ಜಾಗ ಆಗಿದೆ. ಇದರಿಂದ ವರ್ಷವಿಡೀ ಪ್ರವಾಸೋದ್ಯಮ ಜೀವಂತವಾಗಿ ಇಡಬಹುದು. ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗಲಿದೆ.ಸಿ.ನಾರಾಯಣಗೌಡ ಜಿಲ್ಲಾಧ್ಯಕ್ಷ, ಹೋಟೆಲ್ ಮಾಲೀಕರ ಸಂಘ.