ಜಿಲ್ಲೆ

ಕುಪಿತಗೊಂಡ ಅನ್ನದಾತರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ

ಅರಸೀಕೆರೆ: ನಫೆಡ್ ಖರೀದಿ ಕೇಂದ್ರದ ಮೂಲಕ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರದ ನಿರ್ದೇಶನ ನೀಡಿರುವ ಬೆನ್ನಲ್ಲೇ ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿದ್ದು ರೈತರು ಹಾಗೂ ಅಧಿಕಾರಿಗಳ ಜಟಾಪಟಿಗೆ ಕಾರಣವಾಗಿತ್ತು. ಹೇಗಾದರೂ ಸರಿ ಹೆಸರು ನೋಂದಣಿ ಮಾಡಲೇಬೇಕು ಎನ್ನುವ ಇರಾದೆಯೊಂದಿಗೆ ಅಗತ್ಯ ದಾಖಲೆಗಳನ್ನಿಡಿದು ರೈತರು ಮಂಗಳವಾರ ಮುಂಜಾನೆ ನಾಲ್ಕುಗಂಟೆಗೆ ಆಗಮಿಸಿ ಕೌಂಟರ್ ಬಳಿ ಸರತಿ ಸಾಲಿನಲ್ಲಿ ನಿಂತಿದ್ದರು.

ಸರ್ವರ್ ಕೈಕೊಟ್ಟ ಹಿನ್ನಲೆಯಲ್ಲಿ ಮಧ್ಯಾಹ್ನ 12 ಗಂಟೆ ಕಳೆದರೂ ನೊಂದಣಿ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎನ್ನುವ ಸಂದೇಶ ಹೊರಬಿದ್ದಿತ್ತು. ಇದರಿಂದ ಕುಪಿತಗೊಂಡ ಅನ್ನದಾತರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ ನೆರವಿಗೆ ಧಾವಿಸುವಂತೆ ಆಗ್ರಹಿಸಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಸಮಸ್ಯೆಯ ಗಂಭೀರತೆ ಕುರಿತು ಕೆಲ ಕಾಲ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಲೋಪ ಸರಿಪಡಿಸುವತೆ ತಾಕೀತು ಮಾಡಿದರು.

ಪ್ರಕ್ರಿಯೆ ಆರಂಭಗೊಂಡಿದ್ದು ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಎಲ್ಲರಿಗೂ ಅವಕಾಶ ದೊರೆಯಲಿದ್ದು ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡುವ ಮೂಲಕ ಕುಡಿಯುವ ನೀರಿನ ಪ್ಯಾಕ್ ವಿತರಿಸಿ ಸಮಾಧಾನ ಪಡಿಸಿದರು.