ಚಾಮರಾಜನಗರ: ತಾಲೂಕಿನ ಕುದೇರು-ತೊರವಳ್ಳಿ ರಸ್ತೆಯ ಸಮೀಪದಲ್ಲಿರುವ ಕರಿಕಲ್ಲು ಕ್ವಾರಿ ಬಳಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಶನಿವಾರ ಚಿರತೆ ಸೆರೆಯಾಗಿದೆ.
ತಾಲೂಕಿನ ಉಮ್ಮತ್ತೂರು ಬಳಿಯ ಜಮೀನಿನಲ್ಲಿ ಇತ್ತೀಚೆಗೆ ಹಸುಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಅದಲ್ಲದೇ ಈ ಭಾಗದ ಗ್ರಾಮಗಳಾದ ದೇಮಹಳ್ಳಿ, ಕುದೇರು, ತೊರವಳ್ಳಿ, ಯಲಕ್ಕೂರು, ಅಂಕುಶರಾಯನಪುರ, ದಾಸನೂರು, ಬಾಗಳಿ ಹಾಗೂ ಇನ್ನಿತರೆ ಗ್ರಾಮಗಳ ಜಮೀನುಗಳಲ್ಲಿ ಹಸು ಮತ್ತು ಮೇಕೆಗಳ ಮೇಲೆ ದಾಳಿ ಮಾಡುತ್ತಿತ್ತು. ಹಲವಾರು ರೈತರ ಮೇಕೆ ಮತ್ತು ಕರುಗಳನ್ನು ಎತ್ತಿಕೊಂಡು ಹೋಗಿತ್ತು.
ಈ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಚಿರತೆಯನ್ನು ಸೆರೆ ಹಿಡಿಯುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಅದರಂತೆ ಚಿರತೆ ಸೆರೆಗೆ ಕುದೇರು, ತೊರವಳ್ಳಿ ರಸ್ತೆಯ ಸಮೀಪದಲ್ಲಿರುವ ಕರಿಕಲ್ಲು ಕ್ವಾರಿ ಬಳಿ ಅರಣ್ಯ ಇಲಾಖೆಯವರು ಬೋನು ಇರಿಸಿದ್ದರು. ಶನಿವಾರ ಚಿರತೆ ಬೋನಿಗೆ ಬಿದ್ದಿದ್ದು, ಈ ಭಾಗದ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.