ಜಿಲ್ಲೆ

ಕುದರೆ ಮೇಲೆ ನಿವೃತ್ತ ಸೈನಿಕನ ಮೆರವಣಿಗೆ

Bidar

ಬೀದರ್: ಭಾರತೀಯ ಸೇನೆಯ ನಿವೃತ್ತ ಸೈನಿಕರೊಬ್ಬರನ್ನು ಬೀದರ್ ತಾಲ್ಲೂಕಿನ ಶಹಾಪುರ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಸ್ವಾಗತಿಸಿ, ಸನ್ಮಾನಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾಮದವರೇ ಆದ ಚಿತ್ರನಟ ಹಣಮು ಪಾಜಿ ಗೆಳೆಯರ ಬಳಗದ ಸದಸ್ಯರು ಹಾಗೂ ಇತರರು ಜಮ್ಮು- ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮದ ಅನಿಲ್ ಬಂಡೆಪ್ಪ ಮೇತ್ರೆ ಅವರನ್ನು ಗ್ರಾಮಕ್ಕೆ ಕರೆತರಲು ಹೈದರಾಬಾದ್‍ಗೇ ಇನ್ನೋವಾ ಕಾರು ಕಳುಹಿಸಿದ್ದರು. ಅದರಲ್ಲಿ ಬಂದ ಅವರನ್ನು ಶಹಾಪುರ ಗೇಟ್ ಬಳಿ ಪಟಾಕಿ ಸಿಡಿಸಿ ಮಾಲಾರ್ಪಣೆ ಮಾಡಿ ಸಿಹಿ ತಿನ್ನಿಸಿ ಸ್ವಾಗತಿಸಿ ಬರಮಾಡಿಕೊಂಡು, ಬಾಜಾ ಭಜಂತ್ರಿಯೊಂದಿಗೆ ಕುದರೆ ಮೇಲೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಕರೆ ತಂದರು. ಮೆರವಣಿಗೆಯಲ್ಲಿ ಯುವಕರು ಹೆಜ್ಜೆ ಕೂಡ ಹಾಕಿದರು. ಅನಿಲ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹೂ ಮಾಲೆ ಹಾಕಿ ಸನ್ಮಾನಿಸಿದರು.

ಗ್ರಾಮಸ್ಥರು ನೀಡಿದ ಗೌರವದಿಂದ ಪುಳಕಿತರಾದ ಅನಿಲ್ ಅವರು, ಸೇನೆಗೆ ಸೇರಲು ಬಯಸುವ ಗ್ರಾಮದ ಯುವಕರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸದಾ ಸಿದ್ಧನಿರುವೆ. ತೀರಾ ಬಡವರಾಗಿದ್ದರೆ ಅವರಿಗೆ ಆರ್ಥಿಕ ನೆರವನ್ನೂ ಒದಗಿಸುವೆ ಎಂದು ಹೇಳಿದರು.

ದೇಶಕ್ಕಾಗಿ ಸೇವೆ ಸಲ್ಲಿಸಿದ ನನ್ನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡಿರುವುದು ಸಂತಸ ಉಂಟು ಮಾಡಿದೆ ಎಂದು ನುಡಿದರು.

ಅನಿಲ್ ಅವರು 17 ವರ್ಷಗಳ ಕಾಲ ಭಾರತ ಮಾತೆಯ ಸೇವೆ ಮಾಡಿದ್ದಾರೆ. ಅವರ ಸೇವೆ ಗ್ರಾಮದ ಯುವಕರಿಗೆ ಪ್ರೇರಣೆಯಾಗಿದೆ ಎಂದು ಚಿತ್ರನಟ ಹಣಮು ಪಾಜಿ ಹೇಳಿದರು.

ಗ್ರಾಮ ಹಾಗೂ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು. ಹಾಲಿ ಹಾಗೂ ನಿವೃತ್ತ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.

ಬಿಎಸ್‍ಎಫ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮದ ಯೋಧ ಚಂದ್ರಕಾಂತ ಮಾರ್ಥಂಡೆ ಅವರನ್ನೂ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಮಲ್ಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಜಟಗೊಂಡ, ನಾಮದೇವ ಗುಂಪಾ, ನರಸಿಂಗರಾಜ್, ಸಂಗಮೇಶ, ವೆಂಕಟ ಮಾರ್ಥಂಡೆ, ಲೋಕೇಶ ಹಾಸಗೊಂಡ, ಅನಿಲ್ ಸೋಳಂಕೆ, ಪಂಡಿತ ಆರ್.ಕೆ., ಸುನಿಲ್ ಪಾಟೀಲ, ಸಿದ್ದು ಬಿರಾದಾರ, ಅಭಿಷೇಕ ಇದ್ದರು.