ಜಿಲ್ಲೆ

ಕುತೂಹಲ ಕೆರಳಿಸಿದ ಮತ ಎಣಿಕೆ


ಹನೂರು: ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಚುನಾವಣಾ ಮತ ಎಣಿಕೆ ಕಾರ್ಯವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಪ್ರತಿ ಸುತ್ತಿನ ಫಲಿತಾಂಶವನ್ನು ಜಿಲ್ಲಾ ಮತ ಎಣಿಕೆ ಕೇಂದ್ರಕ್ಕೆ ತೆರಳಿದ್ದ ತಮ್ಮ ಆಪ್ತರಿಂದ ಕೇಳಿ ಪಡೆಯುತ್ತಿದ್ದರು. ಇದರಿಂದ ಕ್ಷೇತ್ರದ ಕಾರ್ಯಕರ್ತರಲ್ಲಿ ಕಾತರ ಮನೆ ಮಾಡಿತ್ತು.

ತಮ್ಮ ಅಭ್ಯರ್ಥಿಗಳ ಫಲಿತಾಂಶವನ್ನು ತಿಳಿಯಲು ಬಹುತೇಕ ಕಾರ್ಯಕರ್ತರ ದಂಡು ಬೆಳಗ್ಗೆಯೇ ಮತ ಎಣಿಕೆ ಕೇಂದ್ರಕ್ಕೆ ತೆರಳಿದ್ದರೆ, ಇತ್ತ ಕೆಲ ಕಾರ್ಯಕರ್ತರು, ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಆರ್.ನರೇಂದ್ರ ನಿವಾಸ, ಜೆಡಿಎಸ್‌ನ ಎಂ.ಆರ್. ಮಂಜುನಾಥ್ ಅವರ ಕಚೇರಿ ಹಾಗೂ ಬಿಜೆಪಿಯ ಡಾ.ಪ್ರೀತನ್ ನಾಗಪ್ಪ ಅವರ ನಿವಾಸದ ಮುಂದೆ ಜಮಾಯಿಸಿದ್ದರು.

ಪ್ರತಿ ಸುತ್ತಿನ ಫಲಿತಾಂಶದ ವಿಶ್ಲೇಷಣೆಯಲ್ಲಿ ತೊಡಗಿದ್ದರು. ಅಲ್ಲದೆ ಚುನಾವಣೆಯ ಫಲಿತಾಂಶವನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸುತ್ತಿದ್ದರು. ಆದರೆ ಮಂಜುನಾಥ್ ಮೊದಲನೇ ಸುತ್ತಿನಿಂದ ಕೊನೆಯವರೆಗೂ ಬಹುಮತ ಕಾಯ್ದುಕೊಳ್ಳುತಿದ್ದುದ್ದನ್ನು ಅರಿತ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಮೌನದ ಛಾಯೆ ಆವರಿಸಿತು. ಇತ್ತ ಜೆಡಿಎಸ್ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತು. ಸಂಭ್ರಮದಲ್ಲಿ ತೊಡಗಿದರು.