ಬೀದರ್: ಗೆದ್ದವರು ಖುಷಿಯಲ್ಲಿ ಮಿಂದೆದ್ದರು. ಹೋಳಿ ಹಬ್ಬದಂತೆ ಪರಸ್ಪರ ಗುಲಾಲ ಎರಚಿಕೊಂಡು ಸಂಭ್ರಮದಲ್ಲಿ ತೊಡಗಿದರು. ಆದರೆ ಸೋತವರು ಮುಖ ಬಾಡಿಸಿಕೊಂಡು ಮನೆ ಹಾದಿ ಹಿಡಿದರು. ಗ್ರಾಪಂ ಚುನಾವಣೆ ಫಲಿತಾಂಶದ ನಂತರ ಕಂಡುಬಂದ ದೃಶ್ಯವಿದು.
ಜಿಲ್ಲೆಯ 178 ಗ್ರಾಪಂಗಳ 2912 ಸ್ಥಾನಗಳಿಗಾಗಿ ನಡೆದಿದ್ದ ಚುನಾವಣೆ ಮತ ಎಣಿಕೆ ಕಾರ್ಯ ಬುಧವಾರ ತಾಲೂಕು ಕೇಂದ್ರಗಳಲ್ಲಿ ನಡೆಯಿತು. ಫಲಿತಾಂಶ ಹೊರಬೀಳುತ್ತಲೇ ವಿಜೇತ ಅಭ್ಯರ್ಥಿಗಳು ಮತ್ತವರ ಬೆಂಬಲಿಗರಿಂದ ಭರ್ಜರಿ ವಿಜಯೋತ್ಸವವೇ ನಡೆಯಿತು. ಸೋತವರು ಮಂಕಾಗಿ ಜಾಗ ಖಾಲಿ ಮಾಡಿದರು. ಜಿದ್ದಿನ ಪೈಪೋಟಿಯು ಫಲಿತಾಂಶ ಕಾತರತೆ ಹೆಚ್ಚಿಸಿತ್ತು. ಹೀಗಾಗಿ ಎಣಿಕೆ ಕೇಂದ್ರಗಳ ಸುತ್ತಮುತ್ತ ಜನಜಾತ್ರೆಯೇ ಸೇರಿತ್ತು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಬೀದರ್ ತಾಲೂಕಿನ ಎಣಿಕೆ ಬಿವಿಬಿ ಕಾಲೇಜು, ಔರಾದ್-ಕಮಲನಗರ ತಾಲೂಕು ಎಣಿಕೆ ಔರಾದ್ ಅಮರೇಶ್ವರ ಪದವಿ ಕಾಲೇಜು, ಭಾಲ್ಕಿ ಎಣಿಕೆ ಭಾಲ್ಕಿಯ ಬಸವೇಶ್ವರ ವೃತ್ತ ಹತ್ತಿರದ ಸರ್ಕಾರಿ ಪ್ರೌಢ ಶಾಲೆ, ಬಸವಕಲ್ಯಾಣ-ಹುಲಸೂರು ಎಣಿಕೆ ಬಸವಕಲ್ಯಾಣದ ಥೇರ್ ಮೈದಾನದಲ್ಲಿರುವ ಬಸವೇಶ್ವರ ಪ್ರೌಢ ಶಾಲೆ, ಹುಮನಾಬಾದ್-ಚಿಟಗುಪ್ಪ ತಾಲೂಕು ಎಣಿಕೆಯು ಹುಮನಾಬಾದ್ ಪಟ್ಟಣದ ರಾಮ್ ಆ್ಯಂಡ್ ರಾಜ್ ಪಿಯು ಕಾಲೇಜಿನಲ್ಲಿ ನಡೆಯಿತು. ಬೆಳಗ್ಗೆ 8ಕ್ಕೆ ಎಲ್ಲೆಡೆ ಏಕಕಾಲಕ್ಕೆ ಎಣಿಕೆ ಕಾರ್ಯ ಆರಂಭವಾಯಿತು. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಬಳಸಿದ ಹಿನ್ನಲೆಯಲ್ಲಿ ಮಧ್ಯಾಹ್ನ 3 ರೊಳಗೆ ಫಲಿತಾಂಶ ಅಧಿಕೃತವಾಗಿ ಘೋಷಿಸಲಾಯಿತು. ಹಳ್ಳಿ ಸಮರದ ಫಲಿತಾಂಶ ಮೊದಲಿಗೆ ಪ್ರಕಟಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆಯಿತು.
ಈ ಸಲ ಚುನಾವಣೆಯಲ್ಲಿ ಭಾರಿ ಜಿದ್ದಿನ ಪೈಪೋಟಿ ಬಿದ್ದಿತ್ತು. ಪ್ರಬಲ ಆಕಾಂಕ್ಷಿಗಳು ಕೊನೆಯವರೆಗೂ ನಾನಾ ಕಸರತ್ತು ನಡೆಸಿದ್ದರು. ಒಂದೊಂದು ಮತಕ್ಕೂ ಎಲ್ಲಿಲ್ಲದ ಮಹತ್ವ ನೀಡಿದ್ದರು. ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಲೆಕ್ಕಾಚಾರದಲ್ಲಿ ನಾನಾ ತಂತ್ರ-ಪ್ರತಿತಂತ್ರ ಹೆಣೆದಿದ್ದರು. ಸಮರದಲ್ಲಿ ಗೆದ್ದವರ ಖುಷಿಗಂತೂ ಪಾರವೇ ಇರಲಿಲ್ಲ. ಕೆಲವರಂತೂ ಫಲಿತಾಂಶವ ಪ್ರಕಟಿಸುತ್ತಲೇ ಎಣಿಕೆ ಕೇಂದ್ರದಿಂದ ಓಡೋಡಿ ಹೊರಬಂದು ಕುಣಿದು ಕುಪ್ಪಳಿಸಿದರು. ಕರೊನಾ ಮುಂಜಾಗ್ರತಾ ಕ್ರಮ ಪಾಲನೆ, ಪರಸ್ಪರ ಅಂತರ ಇರಲಿಲ್ಲ. ಬಹುತೇಕರು ಮಾಸ್ಕ್ ಸಹ ತೊಟ್ಟಿರಲಿಲ್ಲ.
ಚುನಾವಣೆ ಸ್ಥಳೀಯರಿಗೆ ಪ್ರತಿಷ್ಠೆಯಾಗಿತ್ತು. ಹೀಗಾಗಿ ಆಯಾ ವಾಡ್೯ ಅಭ್ಯರ್ಥಿ, ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ತಮ್ಮವರು ಗೆದ್ದಿದ್ದಾರೆಂಬ ಸುದ್ದಿ ಕೇಳುತ್ತಲೇ ಹೊರಗಿದ್ದವರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಅಭ್ಯರ್ಥಿ ಹೊರಗೆ ಬರುತ್ತಿದ್ದಂತೆ ಎತ್ತಿಕೊಂಡು ಕುಣಿದಾಡಿದರು. ವಿಜೇತ ಬಹುತೇಕ ಅಭ್ಯರ್ಥಿಗಳು ಕ್ಷೇತ್ರದ ತಮ್ಮ ಪ್ರಮುಖ ನಾಯಕರನ್ನು ಭೇಟಿ ಮಾಡಿ ಖುಷಿ ಹಂಚಿಕೊಂಡರು. ಊರಿಗೆ ತೆರಳಿ ಸಂಭ್ರಮೋತ್ಸವದಲ್ಲಿ ಭಾಗಿಯಾದರು.
ತ್ವರಿತ ಫಲಿತಾಂಶ
ನೀಡಿದ ಇವಿಎಂ
ರಾಜ್ಯದಲ್ಲೇ ಜಿಲ್ಲೆಯಲ್ಲಿ ಮಾತ್ರ ಗ್ರಾಪಂ ಚುನಾವಣೆಯಲ್ಲಿ ಎರಡನೇ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ)ಬಳಕೆಯು ಯಶಸ್ವಿಯಾಗಿದೆ. ಕಳೆದ ಸಲವೂ ಇಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿತ್ತು. ಇವಿಎಂ ಬಳಕೆಯ ಕಾರಣ ಜಿಲ್ಲೆಯಲ್ಲಿಯ ಒಟ್ಟು 2912 ಸ್ಥಾನಗಳ ಮತ ಎಣಿಕೆ ಕಾರ್ಯ ಮಧ್ಯಾಹ್ನ 3ರೊಳಗೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ರಾಮಚಂದ್ರನ್ ಹೇಳಿದ್ದಾರೆ.
ಬೆತ್ತದ ರುಚಿ ನೋಡಿದರು…
ಬೀದರ್ ನಗರದ ಬಿವಿಬಿ ಕಾಲೇಜಿನ ಮತ ಎಣಿಕೆ ಕೇಂದ್ರದ ಎದುರು ಜಮಾಯಿಸಿದ್ದ ಭಾರಿ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು ಆಗಾಗ್ಗೆ ಬೆತ್ತದ ರುಚಿ ತೋರಿಸಬೇಕಾಯಿತು. ಕಾಲೇಜಿನ ಮುಂಭಾಗ, ಅಕ್ಕಪಕ್ಕದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ತಮ್ಮವರು ಗೆದ್ದಿರುವ ಸುದ್ದಿ ಕೇಳುತ್ತಲೇ ಸಂಭ್ರಮಾಚರಣೆ ಮಾಡುತ್ತಿದ್ದರು. ಹಲವರು ಘೋಷಣೆ ಕೂಗುತ್ತ ಕಾಲೇಜಿನ ಪ್ರಮುಖ ದ್ವಾರದ ಕಡೆಗೆ ಧಾವಿಸಿ ಗುಲ್ಲೆಬ್ಬಿಸುತ್ತಿದ್ದರು. ಇವರಿಗೆ ನಿಯಂತ್ರಿಸುವುದಕ್ಕೆ ಪೊಲೀಸರು ಹಲವರಿಗೆ ಬೆತ್ತದ ರುಚಿ ತೋರಿಸಿದರು. ಬೆಳಗ್ಗೆ 8 ಗಂಟೆಗೆ ಬೀದರ್ ತಾಲೂಕಿನ ವಿವಿಧ ಹಳ್ಳಿಗರ ದಂಡು ಕಾಲೇಜಿನ ಅಕ್ಕಪಕ್ಕದಲ್ಲಿ ಸೇರಿತ್ತು. ಮೈಲೂರು ಕ್ರಾಸ್ ಬಳಿ ಪೊಲೀಸರು ರಸ್ತೆ ಬಂದ್ ಮಾಡಿದ್ದರು. ಹೀಗಾಗಿ ಮನ್ನಳ್ಳಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಅತ್ತಿತ್ತ ಓಡುತ್ತಿದ್ದ ಜನರಿಗೆ ಚದುರಿಸಲು ಪೊಲೀಸರು ಬೆನ್ನತ್ತಿದ್ದಾಗ ಕೆಲವರು ನೆಲಕ್ಕೆ ಬಿದ್ದರು. ಮತ್ತೆ ಕೆಲವರಿಗೆ ಲಾಠಿ ಪೆಟ್ಟು ಬಿತ್ತು. ಬೀದರ್ ಬಿಟ್ಟರೆ ಜಿಲ್ಲೆ ಇನ್ನುಳಿದ ತಾಲ್ಲೂಕು ಕೇಂದ್ರಗಳಲ್ಲಿ ಸಹ ಹೆಚ್ಚಿನ ಜನರು ಸೇರಿದ್ದರೂ ಪೊಲೀಸರು ಬಲಪ್ರಯೋಗಿಸುವ ಅವಶ್ಯಕತೆ ಬರಲಿಲ್ಲ.