ಕಮಲನಗರ: ಶಾಸಕ ಪ್ರಭು ಚವ್ಹಾಣ್ ಶುಕ್ರವಾರ ಸ್ವಗ್ರಾಮ ಬೋಂತಿ ತಾಂಡಾದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕುಟುಂಬಸಮೇತ ಹಬ್ಬದಲ್ಲಿ ಪಾಲ್ಗೊಂಡ ಚವ್ಹಾಣ್, ಬಂಜಾರಾ ಕಲಾವಿದರೊಂದಿಗೆ ಕೋಲಾಟವಾಡಿದರಲ್ಲದೆ ಮಹಿಳಾ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಯುವಕರೊಂದಿಗೆ ಧ್ವನಿವರ್ಧಕದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಮಹಿಳೆಯರು ಸಾಂಪ್ರದಾಯಿಕ ಬಣ್ಣ-ಬಣ್ಣದ ಉಡುಗೆಗಳನ್ನು ಧರಿಸಿದ್ದರೆ, ಪುರುಷರು ಪೇಟಾ ಧರಿಸಿ ಗಮನ ಸೆಳೆದರು. ಶಾಸಕರು ಎಲ್ಲರ ಬಳಿ ತೆರಳಿ ಬಣ್ಣ ಹಾಕಿ ಹೋಳಿ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ವಿವಿಧೆಡೆಯಿಂದ ಆಗಮಿಸಿದ ಕಲಾ ತಂಡಗಳಿಂದ ಸಾಂಪ್ರದಾಯಿಕ ಹಾಡು, ನೃತ್ಯ ಹಾಗೂ ಕೋಲಾಟ ಪ್ರದರ್ಶಿಸಲಾಯಿತು.
ಹೋಳಿ ಹಬ್ಬಕ್ಕೆ ದೇಶದ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನಮಾನವಿದೆ. ವಿಶೇಷವಾಗಿ ಬಂಜಾರಾ ಸಮಾಜದಲ್ಲಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ಷೇತ್ರದ ೧೬೫ ತಾಂಡಾಗಳಲ್ಲೂ ಹಬ್ಬ ಅದ್ದೂರಿಯಾಗಿ ನಡೆಯುತ್ತದೆ. ಔರಾದ್ ಕ್ಷೇತ್ರ ಸಮೃದ್ಧಿ ಹೊಂದುವುದರ ಜತೆಗೆ ರೈತರು ಸೇರಿ ಸರ್ವರಿಗೂ ಒಳಿತಾಗಬೇಕೆಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಶಾಸಕ ಚವ್ಹಾಣ್ ತಿಳಿಸಿದರು.
ಪ್ರಮುಖರಾದ ರಾಮಶೆಟ್ಟಿ ಪನ್ನಾಳೆ, ಮಾರುತಿ ಚವ್ಹಾಣ್, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಪ್ರತೀಕ್ ಚವ್ಹಾಣ್, ಪ್ರದೀಪ್ ಪವಾರ್, ಬಾಲಾಜಿ ಠಾಕೂರ್, ಮಂಜು ಸ್ವಾಮಿ, ಸಚಿನ್ ರಾಠೋಡ್, ಜೈಪಾಲ್ ರಾಠೋಡ್, ಗುರುನಾಥ ರಾಜಗೀರಾ, ಬಾಲಾಜಿ ವಾಗ್ಮಾರೆ ಇತರರಿದ್ದರು.