ಜಿಲ್ಲೆ

ಕುಣಿಗಲ್​ಗೆ ಶಾಶ್ವತ ನೀರಾವರಿ ಕಲ್ಪಿಸಿ

ತಾಲೂಕು ಕಚೇರಿ ಎದುರು ಪ್ರತಿಭಟಿಸಿದ ಅನ್ನದಾತ, ತಹಸೀಲ್ದಾರ್​ಗೆ ಮನವಿ

ಕುಣಿಗಲ್​-: ತಾಲೂಕಿಗೆ ಸಮಗ್ರ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನೂರಾರು ರೈತರು ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಮಗ್ರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಹಾರಾಷ್ಟ್ರ ಶಿವಣ್ಣ ನೇತೃತ್ವದಲ್ಲಿ ಸೇರಿದ ನೂರಾರು ರೈತರು ಹಾಗೂ ಮಹಿಳೆಯರು "ನಮ್ಮ ನೀರು ನಮ್ಮ ಹಕ್ಕು' ಎಂದು ಘೋಷಣೆ ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿ ಪ್ರತಿಭಟಿಸಿದರು.

ಈ ವೇಳೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಹಾರಾಷ್ಟ್ರ ಶಿವಣ್ಣ ಮಾತನಾಡಿ, ತಾಲೂಕಿಗೆ 3.03 ಟಿಎಂಸಿ ಹೇಮಾವತಿ ನೂರು ನಿಗದಿಯಾಗಿದೆ. ಹೊಸದಾಗಿ ಲಿಂಕ್​ ಕೆನಾಲ್​ ಯೋಜನೆ ಪ್ರಾರಂಭವಾಗಿದೆ. ನಿಗದಿಯಾಗಿರುವ ನೀರು ತಾಲೂಕಿನ ಎಲ್ಲ ಹೋಬಳಿಗಳಿಗೂ ಹಂಚಿಕೆ ಮಾಡಬೇಕು. ಕಸಬಾ ಹೋಬಳಿಗೆ ನೀರಾವರಿ ವಿಚಾರದಲ್ಲಿ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಂಡು ಕಸಬಾ ಹೋಬಳಿ ಚೆನ್ನಾಪುರ ಕೆರೆ, ಬೈರನಾಯಕನಹಳ್ಳಿ ಕರೆ, ಕಿನ್ನಾಮಂಗಲ ಕೆರೆ, ಹಿತ್ತಲಹಳ್ಳಿ ಕೆರೆ, ಕಾಡಮತ್ತಿಕೆರೆ ಕೆರೆ, ಅರೇಪಾಳ್ಯ ಕೆರೆ, ಸಂತೇಮಾವತ್ತೂರು ಕೆರೆ, ಕದರಾಪುರ ಕೆರೆ, ಸೇರಿ ಚಿಕ್ಕಕೆರೆಗೂ ನೀರು ಹರಿಸಬೇಕೆಂದು ಆಗ್ರಹಿಸಿದರು. ಕಸಬಾ ಹೋಬಳಿ ಯಾವುದೇ ನೀರಾವರಿ ಸೌಲಭ್ಯವಿಲ್ಲದೇ ಮಳೆ ಆಶ್ರಿತ ಪ್ರದೇಶವಾಗಿದೆ. ನೀರಾವರಿ ಯೋಜನೆ ರೂಪಿಸಲು ಸರ್ಕಾರ ಕೂಡಲೇ ಅಗತ್ಯ ಕ್ರಮವಹಿಸಬೇಕು.

ಇಲ್ಲವಾರದೆ ವೈ.ಕೆ.ರಾಮಯ್ಯ ಮಾದರಿಯಲ್ಲಿ ಕುಣಿಗಲ್​, ಹುಲಿಯೂರು ದುರ್ಗ ಹೆದ್ದಾರಿಗೆ ಅಡ್ಡಲಾಗಿ ಗೋಡೆ ನಿಮಾರ್ಣ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್​ ಮಾತನಾಡಿ, ಶಾಸಕ ಡಾ.ರಂಗನಾಥ್​ ಅವರು ಡಿ.26 ತೂಬನ್ನು ಬಿಟ್ಟು ಮುಂದಕ್ಕೆ ಲಿಂಕ್​ ಕೆನಾಲ್​ ಸಂಪರ್ಕವಾಗುವಂತೆ ಯೋಜನೆ ರೂಪಿಸಿ ಎಡೆಯೂರು ಹಾಗೂ ಅಮೃತೂರು ಹೋಬಳಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಡಿ.26 ತೂಬನ್ನು ಲಿಂಕ್​ ಕೆನಾಲ್​ಗೆ ಸರೀಸಬೇಕು. ದೊಡ್ಡಕೆರೆ ನೀರನ್ನು ಕುಡಿವನೀರಿಗಾಗಿ ಮೀಸಲಿಟ್ಟರುವುದನ್ನು ರದ್ದು ಪಡಿಸಿ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬೇಕು. ಕುಣಿಗಲ್​ ಕೆರೆಯಿಂದ ಹುಲಿಯೂರು ದುರ್ಗದವರಿಗೂ ದುರಸ್ತಿಗೊಳಿಸಬೇಕಾದ ಹೇಮಾವತಿ ನಾಲೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಲು ಬಾರದ ತಹಸೀಲ್ದಾರ್​:

ಮನವಿ ಸ್ವೀಕರಿಸಲು ಉಪ ತಹಸೀಲ್ದಾರ್​ ಆಗಮಿಸಿದಾಗ ತಹಸೀಲ್ದಾರ್​ ಎಲ್ಲಿ ಎಂದು ಪ್ರತಿಭಟನಕಾರರು ಪ್ರಶ್ನಿಸಿದಾಗ ತಹಸೀಲ್ದಾರ್​ ರಶ್ಮಿ ಸ್ಥಳ ಪರಿಶೀಲನೆಗೆ ತೆರಳಿದ್ದಾರೆ ಎಂಬ ಮಾಹಿತೆಗೆ ಪ್ರತಿಕ್ರಿಯಿಸಿದ ಪ್ರತಿಭಟನಕಾರರು, ತಹಸೀಲ್ದಾರ್​ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ತಹಸೀಲ್ದಾರ್​ ವಿರುದ್ಧ ಘೋಷ ಕೂಗಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಮಶಾನ ಸ್ಥಳದ ಪರಿಶೀಲನೆಗೆ ಹೋಗಿದ್ದ ತಹಸೀಲ್ದಾರ್​ ರಶ್ಮಿ ಬಂದು ಮನವಿ ಸ್ವೀಕರಿಸಿದ ನಂತರ ಅನ್ನದಾತರು ಧರಣಿಯಿಂದ ಹಿಂದೆ ಸರಿದರು.