ಕುಣಿಗಲ್ : ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದ ಮುಖ್ಯ ರಸ್ತೆಯಲ್ಲಿ ಮಾರುದ್ದದ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಪಟ್ಟಣದ ಆರ್‌ಎಂಸಿ ಯಾರ್ಡ್‌ನಿಂದ ನಂಜುಂಡಪ್ಪ ಪೆಟ್ರೋಲ್ ಬಂಕ್‌ವರೆಗೂ ಎರಡು ಪಥದ ರಸ್ತೆ ಅಭಿವೃದ್ಧಿ ಮಾಡಲಾಗಿದೆ.
ಈ ವೇಳೆ ಹುಚ್ಚಮಾಸ್ತಿಗೌಡ ವೃತ್ತದ ಮುಖ್ಯ ರಸ್ತೆ ಅಭಿವೃದ್ದಿ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕೆಶಿಫ್ ನಡುವೆ ಜಟಾಪಟಿ ಉಂಟಾಗಿ ರಸ್ತೆ ಅಭಿವೃದ್ದಿ ಮಾಡದೇ ಹಾಗೇಯ ಬಿಟ್ಟ ಪರಿಣಾಮ ಇಂದಿಗೂ ಈ ರಸ್ತೆ ಅಭಿವೃದ್ಧಿಯಾಗದೇ ಪಟ್ಟಣದ ಮುಖ್ಯ ರಸ್ತೆಯಲ್ಲೇ ಗುಂಡಿಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಬೈಕ್ ಸವಾರರು ಗುಂಡಿ ಕಾಣದೆ ಬಿದ್ದು ಕೈಕಾಲು ಮುರಿದುಕೊಂಡ ನಿರ್ದಶನಗಳಿವೆ. ಇನ್ನೂ ಮಳೆ ಇಲ್ಲದಿದ್ದರೆ ಧೂಳು ಕುಡಿದುಕೊಂಡೇ ಸಂಚರಿಸಬೇಕಿದೆ.
ಈ ಸಂಬಂಧ ಸಾರ್ವಜನಿಕರು ಸಾಕಷ್ಟು ಭಾರಿ ಜನಪ್ರದಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಇತ್ತೀಚಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪಾರಂಭಿಸಲಾಗುವುದೆಂದು ಶಾಸಕ ಡಾ.ರಂಗನಾಥ್ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಆದರೆ ವಿರೋಧ ಪಕ್ಷದ ಮುಖಂಡರು ಶಾಸಕ ಡಾ.ರಂಗನಾಥ್ ಬೇಕೆಂದೇ ಕಾಮಗಾರಿ ಪ್ರಾರಂಭಿಸದೆ ವಿಳಂಬ ಮಾಡುತ್ತಿದ್ದಾರೆ. ಚುನಾವಣೆ ಸಮೀಪ ಮಾಡಿಕೊಂಡು ಕಾಮಗಾರಿಗೆ ಚಾಲನೆ ನೀಡಿ ಮತಗಿಟ್ಟಿಸಿಕೊಳ್ಳುವ ಯೋಜನೆ ಹಾಕಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಕೀಯ ಮುಖಂಡರು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಸ್ತೆ ಅಭಿವೃದ್ಧಿ ಕಡೆಗಣಿಸಿದ್ದಾರೆ. ರಾಜಕಾರಣ ಮಾಡುವುದನ್ನು ಬಿಟ್ಟು ರಸ್ತೆ ಅಭಿವೃದ್ಧಿ ಮಾಡಬೇಕಿದೆ.
ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಎಡವಟ್ಟಿನಿಂದ ಮುಖ್ಯರಸ್ತೆ 8 ವರ್ಷದಿಂದ ದುರಸ್ಥಿ ಕಾಣದೇ ಗುಂಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಪಟ್ಟಣದಲ್ಲಿ ಎಲ್ಲ ಕಡೆ ರಸ್ತೆ ಅಭಿವೃದ್ಧಿಯಾಗಿ ಉತ್ತಮವಾಗಿದ್ದರೇ, ಪಟ್ಟಣದ ರಸ್ತೆಗಳೇ ಅಭಿವೃದ್ಧಿಯಾಗದಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ. ಸುನೀಲ್ ಗೌಡ, ಮಲ್ಲಘಟ್ಟಾ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ 1.84 ಕೋಟಿ ರೂಪಾಯಿ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿಗೆ ಹಾಗೂ ಚರಂಡಿ ಅಭಿವೃದ್ಧಿಗೆ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕೂಡ ಆಗಿದೆ. ತಾಂತ್ರಿಕ ಕಾರಣದಿಂದ ಕಾಮಗಾರಿ ಪ್ರಾರಂಭಿಸಲಾಗಿಲ್ಲ. ಶೀಘ್ರದಲ್ಲೆ ಕಾಮಗಾರಿ ಪ್ರಾಂಭಿಸಲಾಗುವುದು. ಗಿರಿಗೌಡ, ಇಂಜಿನಿಯರ್, ಲೋಕೋಪಯೋಗಿ ಇಲಾಖೆ