ಲಕ್ಷ್ಮೇಶ್ವರ:ಮದ್ಯ- ನೀರಿನ ಬಾಟಲಿ, ಊಟದ ತಟ್ಟೆ, ಉಪ್ಪಿನಕಾಯಿ ಚೀಟು, ಕ್ಯಾರಿ ಬ್ಯಾಗು, ಸಿಗರೇಟ್ ಪ್ಯಾಕೆಟ್ ರಾಶಿ…
ಪಟ್ಟಣದ ಹೊರವಲಯದ ರಸ್ತೆ ಪಕ್ಕದ ರೈತರ ಜಮೀನು, ಪಾಳುಬಿದ್ದ ದೇವಸ್ಥಾನ, ಶಾಲೆ-ಕಾಲೇಜ್ ಆವರಣ, ಖಾಲಿ ಸೈಟು, ಕೆರೆಯಂಗಳ ಮೊದಲಾದೆಡೆಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿವೆ
ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ವೈನ್ ಶಾಪ್, ದಾಬಾ, ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಮದ್ಯ ವ್ಯಸನಿಗಳು ಅಡ್ಡದಾರಿ ಹಿಡಿದಿದ್ದಾರೆ. ನಿತ್ಯ ಬೆಳಗ್ಗೆ ಜಮೀನಿಗೆ ಬರುವ ರೈತರು, ಪೌರ ಕಾರ್ವಿುಕರು, ಶಾಲಾ-ಕಾಲೇಜ್ ಸಿಬ್ಬಂದಿಗೆ ಈ ಕಸ ತೆಗೆಯುವುದೇ ಕೆಲಸವಾಗಿದೆ.
ದಾಬಾ, ಬಾರ್ಗಳಿಗಿಂತ ಈ ಸ್ಥಳಗಳೇ ಅವರಿಗೆ ಮತ್ತಷ್ಟು ಅನುಕೂಲಕರವಾಗಿವೆ. ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಬಹುದು. ನಿದ್ದೆ ಬಂದರೆ ಮಲಗಬಹುದು. ಇನ್ನು ಪಟ್ಟಣದ ಕೇಂದ್ರಭಾದಲ್ಲಿರುವ ವೈನ್ ಶಾಪ್ಗಳಿಂದ ಪಾರ್ಸಲ್ ತೆಗೆದುಕೊಂಡು ಅಲ್ಲಿಯೇ ಇರುವ ಮೂತ್ರಿಗಳು, ಸಂದಿ-ಗೊಂದಿಗಳಲ್ಲಿ ನಿಂತು ಕುಡಿದು ಬಾಟಲಿ, ಪ್ಯಾಕೆಟ್ಗಳನ್ನು ಅಲ್ಲಿಯೇ ಬೀಸಾಕುತ್ತಿದ್ದಾರೆ.
ಸಂಜೆಯಾಗುತ್ತಿದ್ದಂತೆಯೇ ಪಟ್ಟಣದ ಹೊರವಲಯದ ರಸ್ತೆ ಪಕ್ಕದಲ್ಲಿರುವ ನಮ್ಮ ಜಮೀನಿನ ಮರದ ಕೆಳಗೆ ಕುಡುಕರು ಸೇರುತ್ತಾರೆ. ಕುಡಿದು, ತಿಂದು ಬಾಟಲಿ, ಪ್ಲಾಸ್ಟಿಕ್ ಕಪ್, ಬ್ಯಾಗ್, ಊಟದ ತಟ್ಟೆ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಕುಡಿದ ಮತ್ತಿನಲ್ಲಿ ಬಾಟಲಿಗಳನ್ನು ಹೊಲದಲ್ಲಿ ಒಡೆದು ಹಾಕುತ್ತಾರೆ. ಅನ್ನ ನೀಡುವ ಭೂತಾಯಿಯನ್ನು ಮತ್ತು ಮರದಡಿಯಲ್ಲಿಟ್ಟ ಕಲ್ಲನ್ನು ದೇವರೆಂದು ಪೂಜಿಸುವ ನಮಗೆ ಇದು ನೋವಿನ ಸಂಗತಿಯಾಗಿದೆ. | ವಿರೂಪಾಕ್ಷಪ್ಪ ಆದಿ, ಮುದಕನಗೌಡ ಪಾಟೀಲ, ಬಸವರಾಜ ಬಾವಿಕಟ್ಟಿ ರೈತರು
ವೈನ್ಶಾಪ್, ಹೋಟೆಲ್ ದಾಬಾಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶ ಇರುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಜೆಯಿಂದ ಪಟ್ಟಣ ಮತ್ತು ಹೊರವಲಯದಲ್ಲಿ ಗಸ್ತು ಹೆಚ್ಚಿಸಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ವರ್ತಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.| ಪಿಎಸ್ಐ ಶಿವಯೋಗಿ ಲೋಹಾರ