ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಪರಿಣಾಮ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಪುಂಡರಿಂದ ಕಿಟಕಿಗಳ ಗಾಜು ನುಚ್ಚು ನೂರಾಗಿವೆ.
ಬಂಡಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಹೆಚ್ಚು ಜಾನುವಾರುಗಳನ್ನು ಸಾಕಿದ್ದಾರೆ. ಈ ಹಿಂದೆ ಪಶು ಆಸ್ಪತ್ರೆ ಇರಲಿಲ್ಲ. ಇದರಿಂದ ರೈತರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ದಿಸೆಯಲ್ಲಿ ಕಳೆದ ದಶಕದ ಹಿಂದೆ ಗ್ರಾಮದ ಹಂಚಿನ ಮನೆಯಲ್ಲಿ ಪಶು ಚಿಕಿತ್ಸಾ ಕೇಂದ್ರವನ್ನು ತೆರೆಯಲಾಯಿತು.
ಆದರೆ ಈ ಕೇಂದ್ರವು ಕಿರಿದಾದ್ದರಿಂದ ಔಷಧಗಳನ್ನು ದಾಸ್ತಾನು ಮಾಡಲು ತೊಡಕಾಗಿತ್ತು. ಜತೆಗೆ ಮಳೆ ಬಂದ ವೇಳೆ ನೀರು ಸೋರುತ್ತಿತ್ತು. ಇದರಿಂದ ಪಶುಗಳಿಗೆ ಚಿಕಿತ್ಸೆ ನೀಡಲು ಹಾಗೂ ಕಾರ್ಯನಿರ್ವಹಿಸಲು ತೊಂದರೆಯಾಗಿತ್ತು. ಪಶು ಆಸ್ಪತ್ರೆ ಕಟ್ಟಡ ನಿರ್ಮಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು. ಇದನ್ನು ಮನಗಂಡ ಸರ್ಕಾರ 2016ಲ್ಲಿ ಪಶುಪಾಲನಾ ಇಲಾಖೆಯ ಆರ್‌ಐಡಿಎಫ್ 19ರ ಯೋಜನೆಯಡಿ ಪಶು ಚಿಕಿತ್ಸಾಲಯವನ್ನು ನಿರ್ಮಿಸಲು 24.80 ಲಕ್ಷ ರೂ ಅನುದಾನ ಬಿಡುಗಡೆ ಮಾಡಿತ್ತು. 2018ರ ವೇಳೆಗೆ ಗ್ರಾಮದ ಹೊರವಲಯದಲ್ಲಿ ಸುಸಜ್ಜಿತ ಕಟ್ಟಡವ ಹಾಗೂ ಸುತ್ತಲು ಕಾಂಪೌಂಡ್ ನಿರ್ಮಿಸಿ 2020ರಲ್ಲಿ ಸೇವೆಗೆ ಒದಗಿಸಲಾಯಿತು.
ಕುಡುಕರ ಅಡ್ಡೆಯಾದ ಆಸ್ಪತ್ರೆ: ಈ ಪಶು ಆಸ್ಪತ್ರೆಯು ಗ್ರಾಮದ ಹೊರ ವಲಯದಲ್ಲಿದೆ. ಆದರೆ ಭದ್ರತಾ ಸಿಬ್ಬಂದಿ ಇಲ್ಲ. ಇದರಿಂದ ಸಂಜೆಯಾಗುತ್ತಿದ್ದಂತೆ ಕುಡುಕರು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಇದರಿಂದ ಮದ್ಯದ ಖಾಲಿ ಬಾಟಲಿ, ಪೌಚ್ ಹಾಗೂ ತಿಂಡಿ ತಿನಿಸುಗಳ ತ್ಯಾಜ್ಯವನ್ನು ಬಿಸಾಡುತ್ತಿದ್ದು, ಇವುಗಳನ್ನು ನಿತ್ಯ ತೆರವುಗೊಳಿಸುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸ.
ಗೇಟ್ ಕಳ್ಳತನ: ಈ ಆಸ್ಪತ್ರೆಯ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿರುವುದರಿಂದ ಮದ್ಯದ ಅಮಲಿನಲ್ಲಿ ಪುಂಡರು ಕಟ್ಟಡದಲ್ಲಿರುವ ಎಲ್ಲ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ. ವಿದ್ಯುತ್ ಮೀಟರ್ ಹಾನಿಗೊಳಿಸಿದ್ದಾರೆ. ಜತೆಗೆ ಕಳೆದ ವಾರದ ಹಿಂದೆ ಕಾಂಪೌಂಡ್‌ಗೆ ಅಳವಡಿಸಿದ್ದ ಗೇಟ್ ಕಳ್ಳತನವಾಗಿದ್ದು, ಈ ಸಂಬಂಧ ಹನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹಾಗಾಗಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಈ ಕಟ್ಟಡ ಪುಂಡರ ಹಾವಳಿಗೆ ಹಾನಿಗೊಳಗಾಗುತ್ತಿದ್ದು, ರಕ್ಷಣೆ ಒದಗಿಸುವುದು ಅಗತ್ಯವಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಟ್ಟಡಕ್ಕೆ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ನಿಯೋಜಿಸುವುದರ ಮೂಲಕ ಕುಡುಕರ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.