ಜಿಲ್ಲೆ

ಕುಡುಕರ ಅಡ್ಡೆಯಾದ ಕಾವಲುಗಾನಹಳ್ಳಿ ವಿದ್ಯಾದೇಗುಲ ಆವರಣ!

ಚಿಂತಾಮಣಿ: ಶಾಲೆ ಎಂದರೆ ಹಾಳೆಯ ಚೂರುಗಳು, ಡಸ್ಟರ್ ಧೂಳು, ತುಂಡಾದ ಚಾಕ್‌ಪೀಸ್‌ಗಳು ಸಿಗುವುದು ಸಹಜ, ಆದರೆ ಚಿಂತಾಮಣಿ ನಗರಕ್ಕೆ ಹೊಂದಿಕೊಂಡಿರುವ ಕಾವಲುಗಾನಹಳ್ಳಿ ಶಾಲೆಯಲ್ಲಿ ಬೀಯರ್ ಬಾಟಲ್ ಚೂರುಗಳು, ಮದ್ಯದ ಘಾಟು, ಸಿಗರೇಟ್ ತುಂಡುಗಳು ಕಾಣಿಸುತ್ತವೆ..!

ಕಾವಲುಗಾನಹಳ್ಳಿ ಶಾಲೆ ಆವರಣ ಕುಡುಕರ ಅಡ್ಡೆಯಾಗಿ ಬದಲಾಗಿದೆ, ಮದ್ಯ ಹೀರಿ, ಬಾಡೂಟ, ಎಣ್ಣೆ ಕಿಕ್ ಇಳಿಸಿಕೊಳ್ಳಲು ವಿರಮಿಸುವ ವಿಶ್ರಾಂತಿ ತಾಣವಾಗಿದೆ!

ಕರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಬಾಗಿಲು ತೆರೆಯಲು ಸರ್ಕಾರ ಅನುಮತಿಯನ್ನೇನೋ ನೀಡಿದೆ, ಆದರೆ ಅಲ್ಲಿಯೇ ಮದ್ಯಸೇವನೆಗೆ ನಿಷೇಧ ಹೇರಿರುವುದರಿಂದ ಕುಡುಕರು ಎಣ್ಣೆಹೊಡೆಯಲು ನಗರದ ಹೊರವಲಯದ ಅದರಲ್ಲೂ ಕಾಂಪೌಂಡ್ ಇಲ್ಲದ ವಿದ್ಯಾದೇಗುಲಗಳನ್ನೇ ಮದ್ಯದೇಗುಲಗಳನ್ನಾಗಿ ಮಾಡಿಕೊಂಡಿದ್ದಾರೆ.

ಸಂಜೆಯಾಗುತ್ತಿದ್ದಂತೆ ಎಣ್ಣೆ ಖರೀದಿಸಿ ಬೈಕ್‌ಗಳಲ್ಲಿ, ಕಾರ್‌ಗಳಲ್ಲಿ ಶಾಲಾವರಣಕ್ಕೆ ಬರುವ ಮದ್ಯಪ್ರಿಯರು ಜ್ಞಾನ ದೇಗುಲವಿದು ಕೈ ಮುಗಿದು ಒಳಕ್ಕೆ ಬನ್ನಿ ಎಂಬ ಬರಹದ ಕೆಳಗೆಯೇ ಕುಳಿತು ಮದ್ಯಸೇವಿಸುವುದಲ್ಲದೇ ಬಾಟಲ್‌ಗಳು, ಪಾಸ್ಟಿಕ್ ಲೋಟಗಳು, ಕುರುಕಲು ತಿಂಡಿಯ ಕವರ್‌ಗಳನ್ನು ಅಲ್ಲಿಯೇ ಬಿಸಾಡುತ್ತಿದ್ದಾರೆ.

ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ವೇಳೆ ಕ್ಷುಲ್ಲಕ ಮಾತಿಗೆ ಮಾತು ಬೆಳೆದು ಮದ್ಯದ ಮತ್ತಿನಲ್ಲಿ ಬಾಟಲ್‌ಗಳನ್ನು ಒಡೆದು, ಶಾಲೆ ಕೊಠಡಿಗಳ ಕಿಟಕಿಗಳಿಗೆ ಕಲ್ಲು ಹೊಡೆದು ಗಾಜುಗಳನ್ನು ಪುಡಿಗಟ್ಟಿದ್ದು, ಅವರ ವೀರಾವೇಶಕ್ಕೆ ಶಾಲಾವರಣ ಸಾಕ್ಷಿಯಾಗಿದೆ.!

ಕತ್ತಲಾಗುತ್ತಿದ್ದಂತೆ ಬಾರ್‌ಗಳಲ್ಲಿ ಮದ್ಯ ಖರೀದಿ ಮಾಡಿಕೊಂಡು ಬೂಕ್ ಮತ್ತು ಕಾರುಗಳಲ್ಲಿ ಶಾಲೆಯ ಆವರಣಕ್ಕೆ ಬರುವ ಕುಡುಕರು ರಾತ್ರಿ 10 ಗಂಟೆಯಾದರೂ ಅಲ್ಲಿಯೇ ಬಿಡಾರ ಹೂಡಿರುತ್ತಾರೆ. ಪ್ರಶ್ನಿಸಿದರೆ ನಮ್ಮ ಮೇಲೆಯೇ ಗಲಾಟೆ ಮಾಡ್ತಾರೆ. ಹೆಸರು ಹೇಳಲು ಇಚ್ಚಿಸದ ಪಕ್ಕದ ಜಮೀನಿನ ರೈತ. ಶಾಲೆ ಆವರಣದಲ್ಲಿ ಮದ್ಯ ಸೇವನೆ ಮಾಡಿ ಬಾಟಲ್‌ಗಳನ್ನು ಒಡೆದು ಹೋಗುತ್ತಿದ್ದಾರೆ, ಆವರಣದಲ್ಲಿ ಬಿದ್ದ ಬಾಟಲ್‌ಗಳನ್ನು ನಾವೇ ಬಿಸಾಡುವ ಕೆಲಸ ಮಾಡುತ್ತಿದ್ದೇವೆ. ಕಾಂಪೌಂಡ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಮಂಜೂರಾಗಿಲ್ಲ. ಚಕ್ರಪಾಣಿ ಶಾಲೆ ಶಿಕ್ಷಕ