ಜಿಲ್ಲೆ

ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ - ಅಶೋಕ ದುಡಗುಂಟಿ

ಬೆಳಗಾವಿ: ಯರಗಟ್ಟಿ ತಾಲೂಕಿನ ಪಟ್ಟಣ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಾಲೂಕು ಉಸ್ತುವಾರಿ ಅಧಿಕಾರಿ ಅಶೋಕ ದುಡಗುಂಟಿ ಸೂಚಿಸಿದರು.

ಯರಗಟ್ಟಿ ಪಟ್ಟಣದ ಸರ್ಕಾರಿ ಶಾಲೆಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯರಗಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ, 12 ಗ್ರಾಪಂ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಸಭೆ ನಡೆಸಿ ಸ್ಥಳೀಯ ಮಟ್ಟದ ಸಮಸ್ಯೆ ಪರಿಹರಿಸಲು ಕ್ರಮ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಮಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನವೀಲು ತೀರ್ಥ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ನಿಯಮಿತವಾಗಿ ಬಳಕೆ ಮಾಡಬೇಕು. ಕುಡಿಯುವ ನೀರನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡುವ ಕಟ್ಟಡಗಳ ಮಾಲೀಕರು, ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಜೂನ್‌ನಲ್ಲಿ ಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆ ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು.

ಯಾವ್ಯಾವ ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿವೆ ಎಂಬುವುದನ್ನು ಪರಿಶೀಲನೆ ನಡೆಸಿ ದುರಸ್ತಿ ಮಾಡಬೇಕು. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಪ್ರೌಢ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳು ಆರಂಭಕ್ಕೂ ಮುನ್ನ ಶಿಕ್ಷಕರ ಸಭೆ ನಡೆಸಬೇಕು. ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಪಂ ಕ್ರಮ ವಹಿಸಬೇಕು ಎಂದರು.

ಯರಗಟ್ಟಿ ಪಪಂ ಮುಖ್ಯಾಧಿಕಾರಿ ಎಂ.ಎಚ್.ಭಜಂತ್ರಿ ಮಾತನಾಡಿ, ಸದ್ಯ ಯರಗಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತಾಲೂಕು ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.