ಜಿಲ್ಲೆ

ಕುಡಿವ ನೀರಿನ ತೊಂದರೆಯಾಗದಂತೆ ಗಮನಹರಿಸಿ

ಕಂಪ್ಲಿ: ಹುದ್ದೆಗೆ ನ್ಯಾಯ ಸಿಗುವಂತೆ ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಾಲೂಕು ಉಸ್ತುವಾರಿ ಅಧಿಕಾರಿಯಾದ, ಶಿರಸಿ ಉಪ ವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ತಾಕೀತು ಮಾಡಿದರು.

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಕಂದಾಯ, ತೋಟಗಾರಿಕೆ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಿಲ್ಲ. ಇಲಾಖೆಯ ಸಮಗ್ರ ಮಾಹಿತಿಯ ಬುಕ್‌ಲೆಟ್ ತಂದಿಲ್ಲ. ಮೊದಲ ಸಭೆಯಾಗಿರುವುದರಿಂದ ಲೋಪಗಳನ್ನು ಕ್ಷಮಿಸಲಾಗಿದೆ. ಮುಂದಿನ ಸಭೆಗೆ ಇಲಾಖೆಯ ಮುಖ್ಯಾಧಿಕಾರಿಗಳೇ ಸಮರ್ಪಕ ಮಾಹಿತಿಯೊಂದಿಗೆ ಬರಬೇಕೆಂದರು.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕುಡಿವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಎರಡು ತಿಂಗಳಿಗೊಮ್ಮೆ ನೀರಿನ ತೊಟ್ಟಿಗಳನ್ನು ಶುದ್ಧೀಕರಿಸಬೇಕು. ಸರ್ಕಾರಿ ಆಸ್ಪತ್ರೆಗೆ ತಹಸೀಲ್ದಾರ್ ರಾತ್ರಿ ವೇಳೆ ಅನಿರೀಕ್ಷಿತ ಭೇಟಿ ನೀಡಿ ನನಗೆ ವರದಿ ನೀಡಬೇಕು. ನವಜಾತ ಶಿಶುಗಳ ಕೇಂದ್ರ ಆರಂಭಗೊಳ್ಳಬೇಕಿದ್ದು, ಈ ಕುರಿತು ಶಾಸಕರ ಗಮನಕ್ಕೆ ತರಲಾಗುವುದು. ಡಿಜಿಟಲ್ ಎಕ್ಸ್‌ರೇ ಯಂತ್ರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಿದ್ಯಾರ್ಥಿನಿಲಯಗಳಲ್ಲಿ ಸ್ವಚ್ಛತೆ, ಶುದ್ಧ ಆಹಾರ, ನೀರು ಪೂರೈಸಬೇಕು ಎಂದು ಕಾವ್ಯಾರಾಣಿ ತಿಳಿಸಿದರು. ತಹಸೀಲ್ದಾರ್ ಎಸ್.ಶಿವರಾಜ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಡಿಟಿ ಬಿ.ರವೀಂದ್ರಕುಮಾರ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.