ಚಿತ್ರದುರ್ಗ: ಬೇಸಿಗೆಯಲ್ಲಿ ಜಿಲ್ಲಾದ್ಯಂತ ಎಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ನೀರಿಗೆ ತೊಂದರೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಆದ್ದರಿಂದ ಈಗಿನಿಂದಲೇ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕು, ಜೆಜೆಎಂ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
83 ಗ್ರಾಪಂ ವ್ಯಾಪ್ತಿಯ 236ಕ್ಕೂ ಅಧಿಕ ಗ್ರಾಮಗಳಲ್ಲಿ ಸಮಸ್ಯೆ ಇದೆ. ಜಿಲ್ಲೆಯಲ್ಲಿ 1056 ಆರ್‌ಒ ಘಟಕಗಳ ಪೈಕಿ ಕೆಟ್ಟಿರುವ 165 ಘಟಕಗಳನ್ನು ದುರಸ್ತಿಗೊಳಿಸಬೇಕಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈ ರ್ಮಲ್ಯ ಇಲಾಖೆ ಇಇ ಬಸವನಗೌಡ ಪಾಟೀಲ್ ಹೇಳಿದರು.
ಕೆಟ್ಟಿರುವ ಆರ್‌ಒಗಳ ಸಂಖ್ಯೆ ಜಾಸ್ತಿ ಇದೆ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿದರು. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಅರಿಯುತ್ತಿಲ್ಲವೆಂದು ಶಾಸಕ ಬಿ.ಜಿ. ಗೋವಿಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಆರ್‌ಒಗಳ ಅನುಷ್ಠಾನ ಬಳಿಕ ಗ್ರಾಪಂಗಳಿಗೆ ಹಸ್ತಾಂತರ ಮಾಡುತ್ತಿಲ್ಲವೆಂದು ಶಾಸಕ ಟಿ. ರಘುಮೂರ್ತಿ ದೂರಿದರು.
ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಪ್ರಗತಿ ಕುರಿತು ಡೀನ್ ಮತ್ತು ನಿರ್ದೇಶಕ ಡಾ.ಬಿ.ವೈ. ಯುವರಾಜ್ ಮಾಹಿತಿ ನೀಡುತ್ತಿದ್ದಾಗ, ಜನಪ್ರತಿನಿಧಿಗಳಿಗೆ ಕಾಲೇಜಿನ ಕುರಿತು ಯಾವುದೇ ಮಾಹಿತಿ ಕೊಡುತ್ತಿಲ್ಲ. ನೀವು ಸರ್ವಾಧಿಕಾರಿಯೇ ಎಂದು ಗೋವಿಂದಪ್ಪ ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್‌ಆದಿತ್ಯ ಬಿಸ್ವಾಸ್, ಕಾಲೇಜಿಗೆ ವೈದ್ಯ ಬೋಧಕರ ನೇಮಕಕ್ಕೆ 20-30 ಲಕ್ಷ ರೂ. ಕೇಳಲಾಗುತ್ತಿದೆ ಎಂಬ ಸುದ್ದಿ ಇದೆ. ಬೆಂಗಳೂರಲ್ಲಿ ಸಂದರ್ಶನ ನಡೆಸಿದ್ದು ಯಾಕೆಂದು ಪ್ರಶ್ನಿಸಿದರು.
ಶಾಸಕ ಡಾ.ಎಂ. ಚಂದ್ರಪ್ಪ ನಿರ್ದೇಶಕರನ್ನು ಬದಲಾಯಿಸಬೇಕು ಎಂದರು. ಸಚಿವರು ಒಪ್ಪಿದರೆ ಹಣದ ಬೇಡಿಕೆ ಕುರಿತಂತೆ ತನಿಖೆ ಮಾಡಿಸುವುದಾಗಿ ಬಿಸ್ವಾಸ್ ಹೇಳಿದರು.
ತಮಗೂ ಯಾವುದೇ ಮಾಹಿತಿ ಕೊಡುವುದಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರಿಗೆ ನಾನು ಸಹಕರಿಸುತ್ತಿಲ್ಲವೆಂದು ಡೀನ್, ನನ್ನ ವಿರುದ್ಧ ದೂರಿದ್ದಾರೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ವಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾಲ, ಕಾಲಕ್ಕೆ ಕಾಲೇಜಿನ ಪ್ರಗತಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು.
ಖರೀದಿಯ ತನಿಖೆ: ಕೋವಿಡ್ ಅವಧಿಯಲ್ಲಿ ಖರೀದಿಸಿರುವ ಔಷಧ, ವೈದ್ಯಕೀಯ ಉಪಕರಣಗಳ ಕುರಿತಂತೆ ಬಿಸ್ವಾಸ್ ನೇತೃತ್ವದಲ್ಲಿ ತನಿಖೆ ನಡೆಸಲು ಸಭೆ ನಿರ್ಧರಿಸಿತು.
ಕೋವಿಡ್‌ನಿಂದ ಮೃತಪಟ್ಟ ಕುಟುಂಬ ವರ್ಗದವರಿಗೆ ಪರಿಹಾರ ವಿತರಣೆ ಮಾಹಿತಿ ಸಂಗ್ರಹಿಸುವುದಾಗಿ ಡಿಸಿ ಹೇಳಿದರು. ಬಿಸಿಎಂ ಹಾಸ್ಟೆಲ್‌ಗೆ ಈ ಹಿಂದೆ ಆಹಾರ ಸಾಮಗ್ರಿ ಪೂರೈಸುತ್ತಿದ್ದ ಟೆಂಡರ್‌ದಾರನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಬಿಸ್ವಾಸ್ ಸೂಚಿಸಿದರು. ಡಿಎಸ್ ಡಾ.ಎಸ್.ಪಿ. ರವೀಂದ್ರ ಕೋವಿಡ್ ಹಗರಣ ತನಿಖಾ ಆಯೋಗಕ್ಕೆ ಮಾಹಿತಿ ಕೊಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಅರಿವಳಿಕೆ ಸಹಿತ ತಜ್ಞ ವೈದ್ಯರ ಕೊರತೆ ಇದೆ ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ವಿವರಿಸಿದರು. ಗ್ಯಾರೆಂಟಿಗಳ ಪ್ರಗತಿ ಪರಿಶೀಲಿಸಲಾಯಿತು.
ಎಂಎಲ್‌ಸಿಗಳಾದ ಡಿ.ಟಿ. ಶ್ರೀನಿವಾಸ್, ಕೆ.ಎಸ್.ನವೀನ್, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗಡೆ, ಜಿಲ್ಲಾಧ್ಯಕ್ಷ ಶಿವಣ್ಣ, ಕೆಡಿಪಿ ಸದಸ್ಯರಾದ ಕೆ.ಸಿ. ನಾಗರಾಜ್, ರಂಗಸ್ವಾಮಿ, ಖಲೀಂಉಲ್ಲಾ, ದೀಪಿಕಾ ಸತೀಶ್, ಆರ್.ತಿಮ್ಮಯ್ಯ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಮತ್ತಿತರ ಅಧಿಕಾರಿಗಳು ಇದ್ದರು.
ಬಿಲ್‌ಪೆಂಡಿಂಗ್
ಲೋಕೋಪಯೋಗಿ ಇಲಾಖೆ ಬಿಲ್‌ಪೆಂಡಿಂಗ್‌ಗೆ ಗೋವಿಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ಡಿವೈಡರ್ ತೆರವು ಕಾರ್ಯ ಶೀಘ್ರ ಪೂರ್ಣಗೊಳಿಸಬೇಕೆಂದು ವೀರೇಂದ್ರ ಹೇಳಿದರು.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆಯಾಗುತ್ತಿದೆ ಎಂದು ಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಸರಗಳ್ಳತನ, ಮನೆ ಕಳವು, ದರೋಡೆ ಪ್ರಕರಣಗಳನ್ನು ನಿಯಂತ್ರಿಸಬೇಕೆಂದು ಸಚಿವರು ನಿರ್ದೇಶಿದರು.
ಅಪರಾಧ ಪ್ರಕರಣಗಳ ಕಡಿವಾಣಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ಎಸ್‌ಪಿ ವಿವರಿಸಿದರು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಬೇಕೆಂದು ಶ್ರೀನಿವಾಸ್ ಹೇಳಿ ದರು.
---