ಮುದ್ದೇಬಿಹಾಳ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕಚೇರಿಗಳಿಗೆ ಭೇಟಿ ನೀಡಿದ್ದು ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಜಲಮೂಲಗಳ ಶುಚಿತ್ವಕ್ಕೆ ಪ್ರಥಮ ಆದ್ಯತೆ ನೀಡುವಂತೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ತಾಲೂಕಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಾಡಳಿತದ ಕಚೇರಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಕೆಲವೆಡೆ ಕುಡಿಯುವ ನೀರು, ಶೌಚಗೃಹದ ಸಮಸ್ಯೆಯಿದೆ. ಕಚೇರಿಗಳಿಗೆ ಕಟ್ಟಡಗಳ ಕೊರತೆ ಇದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆಗಳು ದೊರೆಯುವಂತೆ ನೋಡಿಕೊಳ್ಳುತ್ತೇವೆ. ಪಿಂಚಣಿ ಸಮಸ್ಯೆಗಳಿದ್ದಲ್ಲಿ ಮೊದಲ ಆದ್ಯತೆ ಮೇರೆಗೆ ಬಗೆಹರಿಸಲಾಗುತ್ತದೆ. ಸ್ಮಶಾನ ಭೂಮಿಗಳನ್ನು ಸಮಸ್ಯೆ ಇದ್ದಲ್ಲಿ ಗುರುತಿಸಿ ಒದಗಿಸುವ ಕಾರ್ಯ ಮಾಡುತ್ತೇವೆ.ಪುರಸಭೆಯ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಪ್ರಯೋಗಾಲಯ ತಜ್ಞರ ಕೊರತೆಯನ್ನು ಮುಂದಿನ ದಿನಗಳಲ್ಲಿ ನೀಗಿಸಲು ಕ್ರಮ ಜರುಗಿಸುತ್ತೇವೆ. ಸ್ವಚ್ಛತೆಯನ್ನು ಒಂದೇ ದಿನದಲ್ಲಿ ಮಾಡುವುದಕ್ಕಾಗುವುದಿಲ್ಲ. ಹಂತಹಂತವಾಗಿ ಮಾಡಲಾಗುವುದು. ಅಕ್ರಮ ಮರಳು ಮಾರಾಟ ಹಾಗೂ ಮದ್ಯ ಮಾರಾಟದ ಕುರಿತಂತೆ ತಾಳಿಕೋಟೆ, ಮುದ್ದೇಬಿಹಾಳ ಭಾಗದಲ್ಲಿ ದೂರುಗಳು ಬಂದಿವೆ. ಮರಳು ಮಾರಾಟಕ್ಕೆ ಸಂಬಂಧಿಸಿದಂತೆ ಟಾಸ್ಕ್‌ಫೋರ್ಸ್‌ನಲ್ಲಿ ಚರ್ಚೆ ಮಾಡುತ್ತೇವೆ. ಅಬಕಾರಿ ಇಲಾಖೆ ದೂರುಗಳಿಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಕ್ರಮ ಜರುಗಿಸುತ್ತೇವೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ ಒಂದು ಕೊಠಡಿಯನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ಮೀಸಲಿಡುವಂತೆ ಜಿಪಂ ಸಿಇಒ ಅವರಿಗೆ ಕೇಳಿಕೊಂಡಿದ್ದು ಅವರು ಒದಗಿಸಿಕೊಡುವ ಕುರಿತು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಸ್ಥಳಾವಕಾಶ ಇಲ್ಲದ ಸಂದರ್ಭದಲ್ಲಿ ಬೇರೊಂದು ಕೊಠಡಿಯನ್ನು ಒದಗಿಸಲು ಸೂಕ್ತ ಕ್ರಮ ಜರುಗಿಸಲಾಗುವುದು. ಕೇಂದ್ರ ಸ್ಥಾನದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಲಭ್ಯರಿರುವಂತೆ ಈ ವ್ಯವಸ್ಥೆ ರೂಪಿಸಲಾಗುವುದು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಪ್ರಬಾರ ತಹಸೀಲ್ದಾರ್ ಸಿ.ಎ. ಗುಡದಿನ್ನಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ. ಸತೀಶ ತಿವಾರಿ, ಎಸ್.ಡಿ. ಭಾವಿಕಟ್ಟಿ, ಐ.ಎಸ್. ಬಾಗಾಯತ, ಯು.ಬಿ. ಧರಿಕಾರ, ಬಸನಗೌಡ ಬಿರಾದಾರ ಇತರರಿದ್ದರು.