ಜಿಲ್ಲೆ

ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿ

Chitradurga - Desk - Pranav Kumar

ಚಿತ್ರದುರ್ಗ: ಬರವಿದ್ದರೂ ತಾಲೂಕಿನ ಯಾವುದೇ ಗ್ರಾಮದಲ್ಲೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಅದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡು ಪೂರೈಕೆಗೆ ಕ್ರಮವಹಿಸಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಎಲ್ಲ ಸರ್ಕಾರಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವರ್ಷ ಮಳೆಯಾಗದೆ, ಬರಗಾಲ ಆವರಿಸಿದ ಕಾರಣ ಅತಿ ಹೆಚ್ಚು ನೀರಿನ ತೊಂದರೆ ಉಂಟಾಗುವ ಗ್ರಾಮವನ್ನು ಬೇಸಿಗೆಗೂ ಮುನ್ನವೇ ಗುರುತಿಸಿ, ಖಾಸಗಿ ಜಮೀನುಗಳ ಕೊಳವೆ ಬಾವಿಗಳಿಂದ ಎರಡಿಂಚು ಪೈಪ್‌ಲೈನ್ ಮೂಲಕ ಪೂರೈಕೆಗೆ ಕ್ರಮವಹಿಸಿ. ಅಲ್ಲಿಯೂ ನೀರು ಸಿಗದಿದ್ದರೆ, ಟ್ಯಾಂಕರ್‌ನಿಂದ ಸರಬರಾಜು ಮಾಡುವ ಬದಲು ನೂತನ ಕೊಳವೆಬಾವಿ ಕೊರೆಸುವುದು ಕೊನೆಯ ಆಯ್ಕೆಯಾಗಿರಲಿ ಎಂದು ಸಲಹೆ ನೀಡಿದರು.

ತಾಲೂಕಿನ ಗುರಿ ಸಂಬಂಧ ಕಳೆದ ಬಾರಿ ಬಿತ್ತನೆ ಪ್ರಮಾಣ ಎಷ್ಟಾಗಿತ್ತು. ಬೀಜ-ರಸಗೊಬ್ಬರ ಎಷ್ಟು ವಿತರಿಸಲಾಗಿತ್ತು. ಬರದಿಂದಾಗಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ನಷ್ಟವಾಗಿವೆ ಎಂಬ ನಿಖರ ಮಾಹಿತಿ ದಾಖಲಿಸಿ. ಇದರಿಂದ ರೈತರಿಗೆ ಪರಿಹಾರ ವಿತರಣೆಗೆ ಅನುಕೂಲವಾಗಲಿದೆ ಎಂದರು.

ಬೆಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಶಾಲೆ ತೆರೆಯಲು ತೀರ್ಮಾನಿಸಲಾಗಿದೆ. ತಾಲೂಕಿಗೆ ಅಗತ್ಯ ಮೇವು ದಾಸ್ತಾನು ಮಾಡಿಕೊಂಡು ಸರಬರಾಜು ಮಾಡಬೇಕು. ಎಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.

ಲಸಿಕೆ ಹಾಕಲು ಕ್ರಮವಹಿಸಿ: ಕೋವಿಡ್ ನೂತನ ರೂಪಾಂತರಿ ಅಲೆ ಹೊರ ರಾಜ್ಯ, ಹೊರ ಜಿಲ್ಲೆಗಳಲ್ಲಿ ಕಂಡು ಬಂದಿದೆ. ಹೀಗಾಗಿ ಮೂರನೇ ಹಂತದ ಲಸಿಕೆ ನೀಡಲು ಕ್ರಮವಹಿಸಿ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ. ಮುಂಜಾಗ್ರತಾ ಕ್ರಮವಾಗಿ ವೈದ್ಯರು, ಎಎನ್‌ಎಂ, ಆರೋಗ್ಯ ನಿರೀಕ್ಷಕರು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.

ತಾಲೂಕಿನ ಕೆಲ ಪಿಎಚ್‌ಸಿ ಕೇಂದ್ರಗಳಲ್ಲಿ ವೈದ್ಯರಿಲ್ಲ. ಹೀಗಾಗಿ ತೊಂದರೆ ಉಂಟಾಗುತ್ತಿದೆ. ನೇಮಕಕ್ಕೆ ಕ್ರಮವಹಿಸಿದರೆ, ರೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಸಭೆಯ ಗಮನಕ್ಕೆ ತಂದರು. ಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿ ಸರ್ಕಾರಕ್ಕೆ ಕಳಿಸೋಣ ಎಂದು ಎಡಿಸಿ ತಿಳಿಸಿದರು.

24 ತಾಸು ವಿದ್ಯುತ್ ಪೂರೈಸಿ: ಬರದ ಕಾರಣಕ್ಕೆ ಅತಿ ಹೆಚ್ಚಾಗಿ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಸಮರ್ಪಕ ಪೂರೈಕೆ ಸಂಬಂಧ ನಿರಂತರ ಜ್ಯೋತಿ ಯೋಜನೆಯಡಿ ದಿನದ 24 ತಾಸು ವಿದ್ಯುತ್ ಪೂರೈಸಿ. ನಿರ್ಲಕ್ಷ್ಯೆ ವಹಿಸಬೇಡಿ ಎಂದು ಬಿ.ಟಿ.ಕುಮಾರಸ್ವಾಮಿ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

22ರೊಳಗೆ ಬಗೆಹರಿಸುತ್ತೇನೆ: ತಾಲೂಕಿಗೆ ನೂತನವಾಗಿ ಮಂಜೂರಾದ ಅಂಗನವಾಡಿ ಕಟ್ಟಡಗಳ ಪೈಕಿ ಕೆಲವೆಡೆ ಜಾಗದ ಸಮಸ್ಯೆ ಉಂಟಾಗಿದೆ. ಜ. 22ರೊಳಗೆ ಇತ್ಯರ್ಥಪಡಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ಭರವಸೆ ನೀಡಿದರು.

ತಹಸೀಲ್ದಾರ್ ಡಾ.ನಾಗವೇಣಿ ಸೇರಿ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.