ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ನಗರದ ಹೊರವಲಯದ ಬಿಟ್ಟಗೌಡನಹಳ್ಳಿ ಗ್ರಾಮಸ್ಥರು ಹಾಗು ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಬೇಸಿಗೆಕಾಲ ಬಂತೆಂದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಸದ್ಯ 4-5 ದಿನಗಳಿಗೆ ಒಮ್ಮೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಇದು ಯಾವುದಕ್ಕೂ ಸಾಲದಾಗಿದೆ. ಸಕಾಲಕ್ಕೆ ನೀರು ಪೂರೈಸಿ ಎಂದು ಕಳೆದ ಆರೇಳು ತಿಂಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಅವರಿಗೆ ಮನವಿ ಮಾಡಿಕೊಂಡಿದ್ದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಗ್ರಾಮಕ್ಕೆ ಬೋರ್‌ವೆಲ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೀಗ ಬೋರ್‌ವೆಲ್‌ಗಳಲ್ಲೂ ಅಂತರ್ಜಲ ಕಡಿಮೆಯಾಗಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗದ ಕಾರಣ ಗ್ರಾಮಸ್ಥರು ನಿತ್ಯ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಆರೇಳು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ನೀರಿನ ಸಂಪರ್ಕ ಒದಗಿಸಿಕೊಡುವಂತೆ ಒತ್ತಾಯಿಸಿದರು.
ಗ್ರಾಮಕ್ಕೆ ಅಮೃತ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗಾಗಿ ಪೈಪ್ ಅಳವಡಿಸಲಾಗಿದ್ದು, ಇದರ ಮೂಲಕವಾದರೂ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದ ಗ್ರಾಮಸ್ಥರು, ತಾವು ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಗ್ರಾಮದ ಮುಖಂಡರಾದ ಮೊಗಣ್ಣಗೌಡ, ಲೋಕೇಶ್, ಸುಶೀಲಮ್ಮ, ಸುರೇಶ್, ಗೀತಾ, ಜ್ಯೋತಿ, ಮಾನಸ ಇದ್ದರು.