ಹನೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೋಮವಾರ ಆರ್.ಎಸ್ ದೊಡ್ಡಿ ಹೊಸ ಬಡಾವಣೆಯ (13ನೇ ವಾರ್ಡ್) ನಿವಾಸಿಗಳು ಪಟ್ಟಣ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಬಡಾವಣೆಯ ನಿವಾಸಿ ರತ್ನಮ್ಮ ಮಾತನಾಡಿ, ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿದ್ದು, ತೊಂಬೆ ಹಾಗೂ ಮನೆಗಳಿಗೆ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಕಳೆದ ತಿಂಗಳಿನಿಂದ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಇತರ ಬಡಾವಣೆಗಳಿಗೆ ಬಿಂದಿಗೆ ಹಿಡಿದು ಅಲೆಯುವಂತಾಗಿದೆ. ಇತ್ತ ಮನೆ ಬಳಕೆಗೂ ನೀರು ಇಲ್ಲದಂತಾಗಿದೆ. ವರ್ಷದಲ್ಲಿ 6 ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಇದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಕಿಂಚಿತ್ತೂ ಗಮನಹರಿಸಿಲ್ಲ. ಇತ್ತ ನೀರು ಗಂಟಿಗಳನ್ನು ವಿಚಾರಿಸಿದರೆ ಇಲ್ಲಸಲ್ಲದ ನೆಪ ಹೇಳುತ್ತಾರೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಈ ಹಿಂದೆ ಪಪಂ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ದಿಸೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕಚೇರಿಗೆ ತೆರಳಿದ ನಿವಾಸಿಗಳು, ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಅವರಲ್ಲಿ ಸಮಸ್ಯೆ ಹೇಳಿಕೊಂಡರು. ಈ ವೇಳೆ ಮಾತನಾಡಿದ ಅವರು, ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವಾರವಾಗಿದೆಯಷ್ಟೇ. ನೀರೆತ್ತುವ ಮೋಟಾರು ರಿಪೇರಿಗೆ ಕಳುಹಿಸಲಾಗಿದ್ದು, ಒಂದು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ ಎಂದು ಮನವಿ ಮಾಡಿದರು. ಈ ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಪಪಂ ಮುಂಭಾಗ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದರು.
ಶಾಂತಾಲ, ಸುಲೋಚನಾ, ಜಯಲಕ್ಷ್ಮೀ, ಮಾದಪ್ಪ, ಶಿವಮಲ್ಲು, ನಾಗರಾಜು, ಬಸವರಾಜು, ಕುಮಾರ, ಗುರುಸ್ವಾಮಿ, ಮಲ್ಲೇಗೌಡ, ಬಾಬು, ಮಹದೇವ ಇನ್ನಿತರರು ಇದ್ದರು.