ಭದ್ರಾವತಿ: ಎರಡು ವರ್ಷಗಳಿಂದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಪರಿಹಾರವಾಗಿಲ್ಲ. ಸಾಮಾನ್ಯ ಸಭೆಯಲ್ಲಿ ಪ್ರತಿ ಬಾರಿ ಅಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲ ನಗರಸಭಾ ಸದಸ್ಯರು ಭದ್ರಾವತಿ ನಗರಸಭೆ ಸಭಾಂಗಣದ ವೇದಿಕೆ ಎದುರು ಬುಧವಾರ ಧರಣಿ ನಡೆಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿ ಇತರ ವಿಚಾರಗಳ ಚರ್ಚೆ ಗದ್ದಲದ ನಡುವೆ ಮಂಡಿಸಿದ 23 ವಿಷಯಗಳಿಗೆ ಅನುಮೋದಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸದಸ್ಯರಾದ ಶ್ರೇಯಸ್, ಬಿ.ಟಿ.ನಾಗರಾಜ್, ಜಾರ್ಜ್, ಮಂಜುಳಾ ಸುಬ್ಬಣ್ಣ, ಶಶಿಕಲಾ ನಾರಾಯಣಪ್ಪ, ಮೋಹನ್ ಅವರು ವೇದಿಕೆ ಎದುರು ಪ್ರತಿಭಟಿಸಿದರು. ಯಾವ ವಾರ್ಡ್‌ಗಳಲ್ಲೂ ನೀರು ಸರಿಯಾಗಿ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಪ್ಪ ಮಾತನಾಡಿ, ಒಂದು ಟ್ಯಾಂಕ್‌ನಿಂದ 1500 ಮನೆಗಳಿಗೆ ಸಂಪರ್ಕ ಕಲ್ಪಿಸಿ, ಒಂದು ಬಾರಿ ನೀರು ಲೋಡ್ ಮಾಡಿಕೊಂಡರೆ ಎಲ್ಲ ಮನೆಗಳಿಗೆ ನೀರು ಸರಬರಾಜು ಆಗುತ್ತದೆಯೇ ಎಂಬುದನ್ನು ಅಕಾರಿಗಳು ಯೋಚಿಸಬೇಕು. ವೈಜ್ಞಾನಿಕವಾಗಿ ಕೆಲಸ ಮಾಡಿದರೆ ಸರಿಯಾಗುತ್ತದೆ ಎಂದರು. ಸದಸ್ಯ ಟಿಪ್ಪು ಮಾತನಾಡಿ, ವಾಟರ್‌ಮನ್‌ಗಳ ಒಳಜಗಳಗಳಿಂದ ಯಾರೂ ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಪಂಪ್‌ಹೌಸ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಸರಿಯಾಗುತ್ತದೆ ಎಂದರು. ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತೇನೆ. ಏಳು ದಿನದೊಳಗೆ ಎಲ್ಲ ವಾರ್ಡ್‌ನ ನೀರಿನ ಸಮಸ್ಯೆ ಬಗೆಹರಿಸುತ್ತೇನೆ. ಇತ್ತೀಚೆಗೆ ನೀರಿನ ಸಮಸ್ಯೆ ಕೆಲ ವಾರ್ಡ್‌ಗಳಲ್ಲಿದ್ದು, ಸರಿಪಡಿಸುತ್ತೇನೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಎಕ್ಸ್‌ಪ್ರೆಸ್ ಲೈನ್ ಅಳವಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಗರಸಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಎಂ.ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್ ಇದ್ದರು.
ತಪ್ಪಲಿಲ್ಲ ಮುಜುಗರ ಭದ್ರಾವತಿ ಅಭಿವೃದ್ಧಿಗೆ ಶಾಸಕರು ಕೋಟ್ಯಂತರ ರೂ. ತಂದು ಖರ್ಚು ಮಾಡುತ್ತಿದ್ದರೂ ಅಕಾರಿಗಳು ಜನರಿಗೆ ನೀರು, ಸ್ವಚ್ಛತೆ ಹಾಗೂ ವಿದ್ಯುತ್ ನೀಡದಿದ್ದರೆ ಹೇಗೆ ಎಂದು ಸದಸ್ಯ ಬಿ.ಕೆ.ಮೋಹನ್ ಪ್ರಶ್ನಿಸಿದರು. ನಗರಸಭೆ ಅಕಾರಿಗಳ ಬೇಜವಾಬ್ದಾರಿ ಇದಕ್ಕೆಲ್ಲ ಕಾರಣ. ವಿಪಕ್ಷದವರ ಬದಲು ನಾವೇ ಪ್ರತಿಭಟನೆ ಮಾಡಬೇಕಾಗಿರುವುದು ನಾಚಿಕೆಯ ವಿಚಾರವಾಗಿದೆ. ಅಕಾರಿಗಳ ತಪ್ಪಿಗೆ ಜನಪ್ರತಿನಿಗಳು ಜನರಿಂದ ಮಾತು ಕೇಳುವಂತಾಗಿದೆ ಎಂದು ತಿಳಿಸಿದರು. ರಸ್ತೆ ಕಾಮಗಾರಿಗೆ ವಿಳಂಬಕ್ಕೆ ಆಕ್ರೋಶ ನಗರೋತ್ಥಾನ ಯೋಜನೆಯಡಿ ಕೈಗೊಂಡ ರಸ್ತೆ ಕಾಮಗಾರಿಗಳು ಎರಡು ವರ್ಷದಿಂದ ಅರ್ಧಕ್ಕೆ ನಿಂತಿದ್ದು, ರಸ್ತೆಯಲ್ಲಿ ಸಂಚಾರ ಮಾಡುವುದೇ ಕಷ್ಟಕರವಾಗಿದೆ. ಕೆಲಸ ಮಾಡಲು ಆಗದಿದ್ದರೆ ಮನೆಗೆ ಹೋಗಿ ಎಂದು ಸದಸ್ಯೆ ಲತಾ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಬಿ.ಟಿ.ನಾಗರಾಜ್, ನಾಗರತ್ನಾ, ಬಸವರಾಜ್ ಆನೆಕೊಪ್ಪ, ಪಲ್ಲವಿ, ಜಯಶೀಲಾ ಸೇರಿ ಹಲವು ಸದಸ್ಯರು ಪೌರಾಯುಕ್ತರ ವೇದಿಕೆ ಬಳಿ ಬಂದು ಮುತ್ತಿಗೆ ಹಾಕಿದರು. ರಸ್ತೆ ಕಾಮಗಾರಿ ಮುಂದುವರೆಸಿ ಅಥವಾ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಪಟ್ಟುಹಿಡಿದರು. ನಗರೋತ್ಥಾನ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಗುತ್ತಿಗೆದಾರನ ಸಹಾಯಕ ಅಭಿಲಾಷ್ ಸಭೆಗೆ ಆಗಮಿಸಿ ಮುಂದಿನ 15 ದಿನಗಳೊಳಗೆ ಕಾಮಗಾರಿ ಅರಂಭ ಮಾಡಲಾಗುವುದು. ಮಾಡಿರುವ ಕಾಮಗಾರಿ ಹಣ ಬಿಡುಗಡೆ ತಡವಾಗಿದ್ದ ಕಾರಣ ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಯಲಿಲ್ಲ. ಶೀಘ್ರವೇ ಕಾಮಗಾರಿ ಮುಗಿಸಲಾಗುವುದು ಎಂದರು. ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಇಲಾಖೆಗೆ ಸಹಾಯ ಆಗುವಂತೆ ಭದ್ರಾವತಿ ನಗರ ವ್ಯಾಪ್ತಿಯ 40 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಡುವಂತೆ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಬೇಡಿಕೆ ಇಟ್ಟರು. ನಗರಸಭೆಗೆ ಸೇರಿದ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದ್ದು, ನಗರಸಭೆ ಆಸ್ತಿಗಳನ್ನು ಬೇಲಿ ಹಾಕುವ ಮೂಲಕ ಉಳಿಸಿಕೊಳ್ಳುವಂತೆ ಸಭೆಗೆ ಸದಸ್ಯ ಟಿಪ್ಪು ಮಾಹಿತಿ ನೀಡಿದರು.