ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ ಉಲ್ಭಣ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ.

ನಗರ, ಪಟ್ಟಣಗಳ ವಾರ್ಡ್‌ಗಳಲ್ಲಿ ನಿಗದಿತ ದಿನಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೋರ್‌ವೆಲ್‌ಗಳಿಲ್ಲದ ಮನೆಗಳ ನಿವಾಸಿಗಳು ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ.

ಇನ್ನು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಹನೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ನಡೆಯುತ್ತಿದೆ. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಪೈಪ್‌ಲೈನ್ ಅಳವಡಿಸಲು ಅನುಮತಿ ಸಿಗದೆ ಅರಣ್ಯವಾಸಿಗಳಿಗೆ ಮೂಲಸೌಕರ್ಯಗಳಲ್ಲಿ ಪ್ರಧಾನವಾದ ಕುಡಿಯುವ ನೀರಿನ ಸೌಲಭ್ಯ ದೊರೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಚರ್ಚೆಯಾಗಿತ್ತು. ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಬೇಕಿದೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಅನುಮತಿ ನೀಡಲು ಅರಣ್ಯ ಇಲಾಖೆ ವಿಳಂಬ

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಕ್ಕೆ ಜಲ ಜೀವನ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಸ್ಥಗಿತಗೊಂಡಿದೆ. ಅರಣ್ಯ ಇಲಾಖೆ ಅನುಮತಿಗಾಗಿ ಯೋಜನೆ ಕಾಯುತ್ತಿದೆ. ಅನುಮತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇದರಿಂದ ಕಾಡಿನ ಸೋಲಿಗ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ.

ಪ್ರದೀಪ್‌ಕುಮಾರ್,

ಗ್ರಾಪಂ ಸದಸ್ಯ, ಬಿಳಿಗಿರಿರಂಗನ ಬೆಟ್ಟ, ಯಳಂದೂರು

*ಮಣ್ಣು ಮಿಶ್ರಿತ ನೀರು

ಕುರಟ್ಟಿಹೊಸೂರು ಗ್ರಾಮದಲ್ಲಿ ಹೆಚ್ಚು ಕಡು ಬಡವರಿದ್ದು, ಕೂಲಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಕಳೆದ ಒಂದು ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ . ಜತೆಗೆ ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನದ್ದೇ ಒಂದು ದೊಡ್ಡ ಸಮಸ್ಯೆ. ಈಗ ರಿಪೇರಿ ಪಡಿಸಲಾಗಿರುವ ಬೋರ್‌ವೆಲ್‌ನಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿದ್ದು, ರೋಗ ಹರಡುವ ಆತಂಕ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಭಟನೆ ನಡೆಸಲಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ಇದರಿಂದ ಬಿಂದಿಗೆ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.

ಗೋವಿಂದಮ್ಮ, ಎಲ್.ಪಿ.ಎಸ್.ಸಿ ವಿಲೇಜ್,

ಕುರಟ್ಟಿ ಹೊಸೂರು, ಹನೂರು

*ಬಡಾವಣೆಗಳನ್ನು ಗುರುತಿಸಿ

ಗುಂಡ್ಲಪೇಟೆ ಪಟ್ಟಣಕ್ಕೆ ಕಬಿನಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಜಲಮಂಡಲಿಯು ಪಂಪ್‌ಹೌಸ್ ರಿಪೇರಿ ಕಾರ್ಯ ಕೈಗೊಂಡಿರುವುದರಿಂದ ಕೊಳವೆ ಬಾವಿ ನೀರನ್ನು ಅವಲಂಬಿಸಬೇಕಾಗಿದೆ. ಆದರೆ ಕೆಲವು ಬಡಾವಣೆಗಳಿಗೆ ಸಮರ್ಪಕವಾಗಿ ನೀರು ದೊರಕದೆ ಹಣ ಕೊಟ್ಟು ಟ್ಯಾಂಕರ್‌ಗಳಲ್ಲಿ ತರಿಸಬೇಕಾಗಿದೆ. ಆದ್ದರಿಂದ ಪುರಸಭೆ ಕುಡಿಯುವ ನೀರಿನ ಸಮಸ್ಯೆ ಇರುವ ಬಡಾವಣೆಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು.

ಇಂದ್ರನಾಯಕ, ಗುಂಡ್ಲುಪೇಟೆ

*ಶಾಸಕರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲಿ

ಮೊಳಗನಕಟ್ಟೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ನಡೆದಿಲ್ಲ. ತೋಟದ ಮನೆಗಳ ಬೋರ್‌ವೆಲ್ ನೀರನ್ನು ಬಳಸುತ್ತಿದ್ದೇವೆ. ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಹಲವು ಬಾರಿ ದೂರಿದರೂ ಪ್ರಯೋಜನವಾಗಿಲ್ಲ. ಶಾಸಕರು ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗೆ ಗ್ರಾಮದಲ್ಲಿ ಜನರು ಪರದಾಡುವುದನ್ನು ನೋಡಬೇಕು.

ರಾಜ್ ಗೋಪಾಲ್, ಮೊಳಗನಕಟ್ಟೆ, ಕೊಳ್ಳೇಗಾಲ

*ಗುಂಡ್ಲುಪೇಟೆಯಲ್ಲಿ ಸಮಸ್ಯೆ ಇಲ್ಲ

ಗುಂಡ್ಲುಪೇಟೆ ತಾಲೂಕಿನ ಬಹುತೇಕ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಸಂಪರ್ಕ ಪೂರ್ಣಗೊಂಡಿಲ್ಲ. ಇಂತಾ ಕಡೆಗಳಲ್ಲಿ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಯಾವ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಪಂಪ್‌ಹೌಸ್‌ನಲ್ಲಿ ತೊಂದರೆ ಆದಾಗ ಮಾತ್ರ ಆಲತ್ತೂರು, ಹಂಗಳ ಗ್ರಾಮದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತದೆ.

ಶಿವಮೂರ್ತಿ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ವಿಭಾಗದ ಇಂಜಿನಿಯರ್

*ನೀರು ಹೊರಲು ಆಗುತ್ತಿಲ್ಲ

ಕೆಂಚಯ್ಯನದೊಡ್ಡಿ ಗ್ರಾಮದ ಬೀದಿಗಳಿಗೆ ಸಮರ್ಪಕವಾಗಿ ನೀರು ಸರಿಯಾಗಿ ಬಿಡಲಾಗುತ್ತಿದೆ. ಆದರೆ ಮೋಟರ್ ಕೆಟ್ಟಿರುವ ಪರಿಣಾಮ ಕಳೆದ ಮೂರು ದಿನದಿಂದಲೂ ನಮ್ಮ ಮನೆಯ ನಲ್ಲಿಗೆ ನೀರು ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಶಾಲೆ ಸಮೀಪದ ತೊಂಬೆಗೆ ತೆರಳಬೇಕಿದೆ. ನನಗೆ ವಯಸ್ಸಾಗಿರುವುದರಿಂದ ನೀರನ್ನು ಹೊತ್ತು ತರಲು ಕಷ್ಟವಾಗುತ್ತಿದ್ದು, ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.

ನಾಗಮ್ಮ, ಕೆಂಚಯ್ಯನದೊಡ್ಡಿ, ಹನೂರು

*ಕಾವೇರಿ ಹರಿದರೂ ಬೋರ್‌ವೆಲ್ ಆಶ್ರಯ

ಜಲ ಜೀವನ್ ಮಿಷನ್ ಕಾಮಗಾರಿ ಸತ್ತೇಗಾಲ ಗ್ರಾಮದಲ್ಲಿ ಅಪೂರ್ಣವಾಗಿದೆ. ಕೆಲವು ವಾರ್ಡ್‌ಗಳಲ್ಲಿ ಕೆಲಸವಾಗಿದ್ದರೂ ನೀರು ಬರುತ್ತಿಲ್ಲ. ಕಾವೇರಿ ನದಿ ಕೂಗಳತೆ ದೂರದಲ್ಲಿ ಹರಿಯುತ್ತದೆ. ಬೋರ್‌ವೆಲ್ ನೀರನ್ನೇ ಆಶ್ರಯ ಮಾಡಿಕೊಂಡಿದ್ದೇವೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾ ರಿಗಳ ವೈಫಲ್ಯ ಇದಕ್ಕೆ ಕಾರಣವಾಗಿದೆ.

ಎಂ.ವಿನು, ಸತ್ತೇಗಾಲ, ಕೊಳ್ಳೇಗಾಲ

*ಶುದ್ಧವಾದ ನೀರು ಸಿಗುತ್ತಿಲ್ಲ

ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಕೊಳವೆ ಬಾವಿ ನೀರನ್ನು ಪೂರೈಸುತ್ತಿದ್ದಾರೆ . ಇದರಿಂದ ಶುದ್ದ ವಾದ ನೀರು ಕುಡಿಯಲು ಸಿಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಹರಿಸಬೇಕಾಗಿದೆ.

ದೀಪು, ಕಂದಹಳ್ಳಿ, ಯಳಂದೂರು

*ನೀರನ್ನೇ ಬಿಡುತ್ತಿಲ್ಲ

ಬುದ್ಧನಗರದಲ್ಲಿ ಐದು ಮತ್ತು ಹತ್ತು ದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಬೇರೆ ಬಡಾವಣೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಬುದ್ಧನಗರದಲ್ಲಿ ತೊಂಬೆ ನಲ್ಲಿ ನೀರಿನ ಸೌಲಭ್ಯವಿಲ್ಲ. ಜನರು ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ನೀರಿನ ಟ್ಯಾಂಕರ್ ದಂಧೆಯೂ ತಲೆ ಎತ್ತಿದೆ. ನಗರಸಭೆಯವರನ್ನು ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಿ ಎಂದು ಕೇಳಿದರೆ ಮೋಟರ್ ರಿಪೇರಿಯಾಗಿದೆ ಎಂದು ಹೇಳುತ್ತಾರೆ.

ಪಿ.ಅನಿಲ್‌ಕುಮಾರ್, ಬುದ್ಧನಗರ, ಚಾಮರಾಜನಗರ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ಸಚಿವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆಸಿ ಕ್ರಮವಹಿಸಲಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಆಗದೆ ಇರುವ ದೂರು ಕೇಳಿಬಂದರೆ 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಶಾಶ್ವತ ಪರಿಹಾರವನ್ನೂ ಕಂಡುಕೊಳ್ಳಬೇಕೆಂದು ತಿಳಿಸಲಾಗಿದೆ.

ಮೋನಾ ರೋತ್, ಜಿಪಂ ಸಿಇಒ, ಚಾಮರಾಜನಗರ