ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ 24 ಗಂಟೆಯೊಳಗೆ ಬಗೆಹರಿಸಿ: ಡಿಸಿ

ಹಾಸನ: ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ ಗ್ರಾಮಗಳಿಗೆ 24 ಗಂಟೆಯೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆಯಾಗದಂತೆ ಕ್ರಮವಹಿಬೇಕು.ಕುಡಿಯುವ ನೀರಿನ ಬಗ್ಗೆ ಸುದ್ದಿ ಪ್ರಕಟವಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಕಂಟ್ರೋಲ್ ರೂಂ ತೆರೆಯಬೇಕು ಕಂಟ್ರೋಲ್ ರೂಂ ನಂಬರ್ ಅನ್ನು ಎಲ್ಲೆಡೆ ಪ್ರಚಾರ ಮಾಡಬೇಕು. ಮುಂದಿನ ಏಪ್ರಿಲ್ ಹಾಗೂ ಜೂನ್ ಮಾಹೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದು ಖಾಸಗಿ ಬೋರ್‌ವೇಲ್ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ಕುಡಿಯುವ ನೀರಿಗೆ ಟೆಂಡರ್ ಕರೆದು ಸಿದ್ಧತೆ ಮಾಡಿಕೊಳ್ಳಬೇಕು.ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ ್ಯ ತೋರಿದರೆ ಕ್ರಮ ಕೈಗೊಳ್ಳಲಾಗುವುದು.ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವುದೇ ರಜೆ ನೀಡಬಾರದು, ಕುಡಿಯುವ ನೀರು, ಜಾನುವಾರು ಮೇವು ಹಾಗೂ ಬರ ನಿರ್ವಹಣೆಗೆ ಪ್ರತಿ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ಈಗಾಗಲೇ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದರು.
ತಹಸಿಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ 24 ಗಂಟೆ ಒಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕಿ ರಾಜಾಸುಲೋಚನಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಅರುಣ್ ಕುಮಾರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.