ಇಂಡಿ ತಾಲೂಕಿನ ಮರಗೂರದ ಭೀಮಾ ಸಕ್ಕರೆ ಕಾರ್ಖಾನೆಯಲ್ಲಿ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ್ ೋರ್ಸ್ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಎಸಿ ಅಬೀದ್ ಗದ್ಯಾಳ, ಬಾಬು ರಾಠೋಡ, ಮಹಾದೇವಪ್ಪ ಏವೂರ ಇತರರಿದ್ದರು. 
ಜಿಲ್ಲೆ

ಕುಡಿಯುವ ನೀರಿನ ತೊಂದರೆ ಆಗದಿರಲಿ

ಇಂಡಿ: ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ನಡೆದ ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ 50 ಟ್ಯಾಂಕರ್ ಮೂಲಕ 106 ಟ್ರಿಪ್ ನೀರು ಪೂರೈಸಲಾಗುತ್ತಿದ್ದು, ವಸತಿ ಪ್ರದೇಶ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.ಚುನಾವಣೆ ಕಾರ್ಯವೆಂದು ನೀರಿನ ಪೂರೈಕೆ ಕುರಿತು ನಿರ್ಲಕ್ಷ ಮಾಡಬಾರದು. ಬರುವ ದಿನಗಳಲ್ಲಿ ಖುದ್ದಾಗಿ ಗ್ರಾ.ಪಂಗಳಿಗೆ ತಾಲೂಕಿನ ಎಲ್ಲ ಅಧಿಕಾರಿಗಳ ಜತೆ ಭೇಟಿ ನೀಡಿ ಜನರ ಮಧ್ಯೆ ನೀರಿನ ಸಮಸ್ಯೆ ಕುರಿತು ಚರ್ಚಿಸುತ್ತೇನೆ. ಹಂಜಗಿ ಕೆರೆಗೆ ಶೀಘ್ರದಲ್ಲಿ ನೀರು ತುಂಬಲಾಗುವುದು. ಇದರಿಂದ 34 ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಅಧೀಕ್ಷಕ ಇಂಜಿನಿಯರ್ ಮನೋಜಕುಮಾರ ಗಡಬಳ್ಳಿ ಮಾತನಾಡಿ, ನಾರಾಯಣಪುರ ಜಲಾಶಯದಲ್ಲಿ ಕುಡಿಯುವ ನೀರಿದ್ದು ಅಧಿಕಾರಿ ಒಂದು ವಾರ ಮುಂಚಿತ ತಿಳಿಸಿದರೆ ನೀರು ಬಿಡಲಾಗುವುದು ಎಂದರು.

ಎಸಿ ಅಬೀದ್ ಗದ್ಯಾಳ ಮಾತನಾಡಿ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು ಸಧ್ಯದ ಪರಿಸ್ಥಿತಿಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಇಲ್ಲ ಎಂದರು.

ತಹಸೀಲ್ದಾರ್ ಮಂಜುಳಾ ನಾಯಕ, ಇಒ ಬಾಬು ರಾಠೋಡ, ಕೃಷಿ ಇಲಾಖೆಯ ಮಹಾದೇವಪ್ಪ ಏವೂರ, ತೋಟಗಾರಿಕೆ ಇಲಾಖೆಯ ಎಚ್.ಎಸ್. ಪಾಟೀಲ, ಎಸ್.ಆರ್. ರುದ್ರವಾಡಿ, ಎಸ್.ಆರ್. ಮೆಂಡೆಗಾರ ಇತರರಿದ್ದರು.