ಜಿಲ್ಲೆ

ಕುಡಿಯುವ ನೀರಿನ ಆತಂಕ ದೂರ

ಕುಶಾಲನಗರ: ಕೊಡಗು ಜಿಲ್ಲೆಯಾದ್ಯಂತ ಕಳೆದ 2 ದಿನಗಳು ನಿರೀಕ್ಷೆ ಮೀರಿದ ಮಳೆಯಾಗಿರುವ ಕಾರಣ ಕುಶಾಲನಗರ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಆತಂಕ ದೂರಾಗಿದೆ ಎಂದು ನಗರದ ನೀರು ಸರಬರಾಜು ಮಂಡಳಿಯ ಅಭಿಯಂತರ ಆನಂದ ತಿಳಿಸಿದ್ದಾರೆ.


ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ನಮಗೆ ಈ ರೀತಿಯ ಮಳೆಯಾದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಆದರೂ ಇಲಾಖೆ ವತಿಯಿಂದ ಜನರಿಗೆ ನೀರಿಗೆ ಸಮಸ್ಯೆ ಆಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ 9 ಸಾವಿರ ಮತ್ತು 12 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್‌ಗಳನ್ನು ಪೂರೈಸಲು ಟೆಂಡರ್ ನೀಡಲಾಗಿದೆ. ಒಂದು ದಿನ ಮುಂಚಿತವಾಗಿ ತಿಳಿಸಿದರೆ ಟ್ಯಾಂಕರ್ ಒದಗಿಸುತ್ತಾರೆ. ನದಿ ಮೂಲ ಅಥವಾ ಪುರಸಭೆಯ ಬೋರವೆಲ್ ಮೂಲಕ ನೀರು ಸಂಗ್ರಹಿಸಿಕೊಂಡು ಅವಶ್ಯವಿರುವವರಿಗೆ ನೀರು ಪೂರೈಸಲಾಗುವುದು. ಒಟ್ಟಿನಲ್ಲಿ ಈ ಬಾರಿ ಕಾವೇರಿ ನದಿಗೆ ಸಾವಿರಾರು ರೂ. ಖರ್ಚ್ಚು ಮಾಡಿ ಮರಳಿನ ಮೂಟೆಗಳನ್ನು ಹಾಕಿ ನೀರು ಶೇಖರಿಸುವ ಅವಶ್ಯಕತೆ ಇಲ್ಲ ಎಂಧರು.


ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅಂದಾಜಿನ ಪ್ರಕಾರ 29 ಸಾವಿರ ಜನಸಂಖ್ಯೆ ಇದೆ. ನಿಯಮದ ಪ್ರಕಾರ ಒಬ್ಬ ವ್ಯಕ್ತಿಗೆ ನಿತ್ಯ 130 ಲೀಟರ್ ನೀರಿನ ಅವಶ್ಯವಿರುತ್ತದೆ. ಅಷ್ಟು ನೀರನ್ನು ಕೊಡಬೇಕು. ಆದರೆ ಈ ವ್ಯಾಪ್ತಿಯಲ್ಲಿ ನಾವು 100 ಲೀ. ನೀರು ಪೂರೈಸುತ್ತಿದ್ದೇವೆೆ. ನಗರ ವ್ಯಾಪ್ತಿಗೆ ದಿನ ಒಂದಕ್ಕೆ ಕನಿಷ್ಠ 40 ಲಕ್ಷ ಲೀ. ನೀರಿನ ಬೇಡಿಕೆ ಇದೆ. ನಾವು ಕೊಡುತ್ತಿರುವುದು 28 ಲಕ್ಷ ಲೀ. ಅಷ್ಟೇ. ಅಂದರೆ 22 ಸಾವಿರ ಜನರಿಗೆ ಮಾತ್ರ ನೀರು ಕೊಡುತ್ತಿದ್ದೇವೆ. ಪುರಸಭೆ ವತಿಯಿಂದ ಕೊರೆಸಿರುವ ಬೋರವೆಲ್ ಅನ್ನು ಉಳಿದ 7 ಸಾವಿರ ಜನರು ಅವಲಂಬಿಸಿದ್ದಾರೆ ಎಂದು ಆನಂದ ವಿವರಿಸಿದರು.



ಮರಳಿನ ಮೂಟೆ ಹಾಕಿ ನೀರು ಶೇಖರಣೆ: ಮಾರ್ಚ್ ತಿಂಗಳಲ್ಲಿ ಒಂದೆರಡು ಬಾರಿ ಉತ್ತಮ ಮಳೆಯಾದರೆ ಸಾಕು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿನ
ಅಭಾವ ಇರುವುದಿಲ್ಲ. ಇದುವರೆಗೂ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಮುಂದಿನ ದಿನಗಳಲ್ಲೂ ನೀರಿನ ತೊಂದರೆಯಾಗದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಅವಶ್ಯ ಬಿದ್ದರೆ ನದಿಗೆ ಅಡ್ಡಲಾಗಿ ಮರಳಿನ ಮೂಟೆ ಹಾಕಿ ನೀರು ಶೇಖರಣೆ ಮಾಡಲಾಗುವುದು ಆನಂದ ತಿಳಿಸಿದ್ದಾರೆ.