ಜಿಲ್ಲೆ

ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ : ಅಧಿಕಾರಿಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸೂಚನೆ

ರಾಮನಗರ

ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ವಹಿಸುವ ಜತೆಗೆ, ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನ ಅಭಾವ ಇರುವ ಗ್ರಾಮಗಳನ್ನು ಗುರುತಿಸಿ ಕೊಳವೆಬಾವಿ ಕೊರೆಸಬೇಕು, ಯಾವುದೇ ಗ್ರಾಮದಲ್ಲಿಯೂ ನೀರಿಗೆ ಸಮಸ್ಯೆ ಎದುರಾಗಬಾರದು. ಕೃಷಿ ಚಟುವಟಿಕೆಗಳಿಗೆ ಬೇಕಾದ ಅಗತ್ಯ ಸೌಲಭ್ಯ ನೀಡುವಲ್ಲಿಯೂ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ನೀರಿನ ಮಿತ ಬಳಕೆ ಬಗ್ಗೆ ಅಧಿಕಾರಿಗಳು ಜನಜಾಗೃತಿ ಮೂಡಿಸಬೇಕು.ಶಾಲಾ ಕಾಲೇಜುಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಟಕ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಕೆಲವು ಕಡೆಗಳಲ್ಲಿ ಶಿಕ್ಷಕರು ಮತ್ತು ಶಾಲಾ ಕೊಠಡಿಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಆದ್ಯತೆ ಮೇರೆಗೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿ ವಿಷಯವಾರು ಶಿಕ್ಷಕರ ಕೊರತೆ ಪಟ್ಟಿಯನ್ನು ನೀಡುವಂತೆ ಸೂಚಿಸಿದರು. ಶಿಕ್ಷಕರಿಗೆ ಹೆಚ್ಚಿನ ತರಬೇತಿಯನ್ನು ನೀಡುವ ಮೂಲಕ ಮಕ್ಕಳ ಕಲಿಕಾ ಣಮಟ್ಟವನ್ನು ಹೆಚ್ಚಿಸಲು ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅನಿತಾ ಕುಮಾರಸ್ವಾಮಿ ಸೂಚನೆ ನೀಡಿದರು.

ಸಭೆಯಲ್ಲಿ ತಾಪಂ ಇಒ ಶಿವಕುಮಾರ್​, ತಹಸೀಲ್ದಾರ್​ ವಿಜಯ್​ಕುಮಾರ್​, ತಾಪಂ ಸಹಾಯ ನಿರ್ದೇಶಕ ರೂಪೇಶ್​ ಕುಮಾರ್​, ಕೆಡಿಪಿ ಸದಸ್ಯರಾದ ನಾರಾಯಣರೆಡ್ಡಿ, ಪ್ರಶಾಂತ್​, ಪುಷ್ಪಲತಾ ಆರಾಧ್ಯ, ಸಿದ್ದೇಗೌಡ, ಸಂಜಯ್ಯ, ಸಿಂಗ್ರಯ್ಯ ಮುಂತಾದವರು ಪಾಲ್ಗೊಂಡಿದ್ದರು.

ಇ-ಶ್ರಮ್​ ಕಾರ್ಡ್​ ವಿತರಣೆಯಲ್ಲಿ ಅಕ್ರಮ ದೂರು : ಕಾರ್ಮಿಕ ಇಲಾಖೆಯಡಿಯಲ್ಲಿ ನೀಡುವ ಇ&ಶ್ರಮ್​ ಕಾರ್ಡ್​ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ದೂರುಗಳು ಕೇಳಿ ಬಂದರೆ ಖಂಡಿತವಾಗಿ ಅಂತಹ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಎಚ್ಚರಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಜನಸಾಮಾನ್ಯರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ತಾಳ್ಮೆ ಕಳೆದುಕೊಳ್ಳದಿರಿ: ಕಾನೂನು ಪಾಲನೆ ಹೆಸರಲ್ಲಿ ಪೊಲೀಸ್​ ಸಿಬ್ಬಂದಿ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುವುದು ಬೇಡ. ಯಾರೇ ತಪು$್ಪ ಮಾಡಿದರೂ ಕ್ರಮ ಕೈಗೊಳ್ಳಿ. ಆದರೆ ಸಂಯಮ ಪಾಲಿಸಿ, ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿ ಎಂದು ಪೊಲೀಸ್​ ಅಧಿಕಾರಿಗಳಿಗೆ ಅನಿತಾ ಸೂಚನೆ ನೀಡಿದರು. ಜನವಸತಿ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಅವಕಾಶ ನೀಡಬಾರದು ಎಂದು ಅನಿತಾ ಕುಮಾರಸ್ವಾಮಿ ನಿರ್ದೇಶನ ನೀಡಿದರು.