ಚಿತ್ರದುರ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಬೇಸಿಗೆಯಲ್ಲಿ ತೊಂದರೆಯಾಗುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಪಂ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಬೂದು ನೀರು ಮತ್ತು ಮಲತ್ಯಾಜ್ಯ ಸಂಸ್ಕರಣಾ ಘಟಕ, ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮಾಲೀಕರಿಂದ ಬಾಡಿಗೆ ಪಡೆದು ಪೂರೈಕೆಗೆ ಕ್ರಮವಹಿಸಿ ಎಂದು ತಾಕೀತು ಮಾಡಿದರು.
ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ತಾಪಂಗಳಲ್ಲಿ ಸಹಾಯವಾಣಿ ತೆರೆಯುವಂತೆ ತಾಪಂ ಇಒಗಳಿಗೆ ಸಲಹೆ ನೀಡಿದರು.
ಜವನಗೊಂಡನಹಳ್ಳಿ ಮತ್ತು ಹರ್ತಿಕೋಟೆ ಕುಡಿಯುವ ನೀರು ಯೋಜನೆಗಳ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಪ್ರಯೋಗಾರ್ಥ ಪರೀಕ್ಷೆ ನಡೆಸಬೇಕು. ಗ್ರಾಪಂ ವ್ಯಾಪ್ತಿಯ ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಹಿರಿಯೂರು ತಾಲೂಕಿನ ವಿ.ವಿ.ಪುರ ಗ್ರಾಪಂನಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಪೂರ್ಣಗೊಂಡಿದ್ದು, ಪ್ರಯೋಗಾರ್ಥ ಪರೀಕ್ಷೆ ನಡೆಸಿ. ಜಿಲ್ಲೆಯ ನಗರಂಗೆರೆ, ರಾಂಪುರ, ಗುಂಡೇರಿ, ದ್ಯಾಮವ್ವನಹಳ್ಳಿ, ಬೆಲಗೂರು ಪಂಚಾಯಿತಿಗಳಲ್ಲಿಯೂ ಸಂಸ್ಕರಣಾ ಘಟಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿಪಂ ಯೋಜನಾ ನಿರ್ದೇಶಕಿ ಸಿ.ಎಸ್.ಗಾಯತ್ರಿ, ಅಧಿಕಾರಿಗಳಾದ ಬಸನಗೌಡ ಪಾಟೀಲ್, ಡಿ.ಎಸ್.ಸುಮಾ, ಮಂಜುನಾಥ ಎಸ್ ನಾಡರ್, ಸಮಾಲೋಚಕರಾದ ಬಿ.ಸಿ.ನಾಗರಾಜ್, ವಿನಯ್‌ಕುಮಾರ್, ಪ್ರಮೀಳಾ, ಶಶಿಧರ್, ಸ್ನೇಹನ್, ತಾಪಂ ಇಒಗಳಾದ ಸತೀಶ್, ರವಿಕುಮಾರ್, ವಿಶ್ವನಾಥ್, ಸುನೀಲ್ ಇತರರಿದ್ದರು.