ಮಧುಗಿರಿ: ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೀರು ಸರಬರಾಜು ನೀಡಬೇಕು ಎಂದು ಅಧಿಕಾರಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮಧುಗಿರಿಯಲ್ಲಿ ನೀರಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಆದ್ದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕೆಲವೆಡೆ ನೀರು ಪೋಲಾಗುತ್ತಿರುವ ದೂರುಗಳಿದ್ದು, ವಾರ್ಡುಗಳಿಗೆ ಭೇಟಿ ನೀಡಿ ನೀರು ಪೋಲಾಗದಂತೆ ಕ್ರಮ ವಹಿಸಬೇಕು. ಪುರಸಭೆಯ ಕೆಲ ಸಿಬ್ಬಂದಿ ಬೆಳಗ್ಗೆ ಕೆಲಸ ನಿರ್ವಹಿಸಿ ಮಧ್ಯಾಹ್ನದ ನಂತರ ಎಲ್ಲಿಗೆ ಹೋಗುತ್ತಾರೆ ಎಂಬುದೇ ಗೊತ್ತಿಲ್ಲ. ಇದರ ಬಗ್ಗೆ ಕ್ರಮವಹಿಸಿ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಇಂಜಿನಿಯರ್ಗೆ ಕೇಳಿದಾಗ, ಶ್ರೀವಾಗಿ ಪೂರ್ಣಗೊಳಿಸುತ್ತೇವೆ ಎಂದಾಗ, ನನಗೆ ಯುಜಿಡಿ ಕಾಮಗಾರಿ ತೃಪ್ತಿ ತಂದಿಲ್ಲ. ಕೆಲಸ ಪೂರ್ಣಗೊಂಡಿದೆ ಎಂದು ನೀವು ಹೇಳುತ್ತೀರಿ. ಆದರೆ ಸ್ಟೆರಲೈಸ್ ನೀರು ಸರಬರಾಜು ಮಾಡದೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಗೆ ಹೇಳುತ್ತೀರಾ... ಎಂದು ಪ್ರಶ್ನಿಸಿದ ಸಚಿವರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಒಳಚರಂಡಿ ಕಾಮಗಾರಿಯ ವೀಣೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆಗಮಿಸುತ್ತಾರೆ ಎಂದು ತಿಳಿಸಿದರು.
ಆಯಾ ವಾರ್ಡಿನ ಸದಸ್ಯರು ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಪಟ್ಟಣದ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಕೊಠಡಿ ದುರಸ್ತಿಗೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹಗಳ ನಿರ್ಮಾಣಕ್ಕೆ ಹಣ ಮೀಸಲಿಟ್ಟು, ಶಾಲೆಯ ಪ್ರಾರಂಭದೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋತ್ಸಾಹ ಧನ 3.90 ಲ, ಅಂಗವಿಕಲರ ಆರೈಕೆದಾರರಿಗೆ 2.30 ಲ ಹಾಗೂ 23. 71 ಲ ಮೌಲ್ಯದ 3 ಆಟೋ ಟಿಪ್ಪರ್ಗಳನ್ನು ಸಚಿವರು ವಿತರಿಸಿದರು. ಪುರಸಭೆ ಉಪಾಧ್ಯೆ ಸುಜಾತಾ ಶಂಕರ್ ನಾರಾಯಣ್, ಮುಖ್ಯಾಧಿಕಾರಿ ಸುರೇಶ್, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ವಿವಿಧ ಕಾಮಗಾರಿಗೆ ಅನುದಾನ ಬಿಡುಗಡೆ: ಪಟ್ಟಣದ ಅಭಿವೃದ್ಧಿಗೆ ಎಸ್ಎ್ಸಿ ಯೋಜನೆಯಡಿ 25 ಕೋಟಿ, ಅಲ್ಪ ಸಂಖ್ಯಾತರ ಕಲ್ಯಾಣ ಯೋಜನೆಯಡಿ 4 ಕೋಟಿ ಬಿಡುಗಡೆಯಾಗಿದ್ದು, ಈ ವಿಶೇಷ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆ ಮತ್ತು ಚರಂಡಿ ಕಾಮಗಾರಿ, ಅಮೃತ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಯೋಜನೆಗೆ 40 ಕೋಟಿ, ಪಾರ್ಕ್ ಮತ್ತು ಕಲ್ಯಾಣಿಗಳ ಅಭಿವೃದ್ಧಿಗೆ 5 ಕೋಟಿ, ನಗರೋತ್ಥಾನ ಯೋಜನೆಯಡಿ 2 ಕೋಟಿ, ಪುರಸಭೆ ಆವರಣದಲ್ಲಿರುವ ಮಾಲೀ ಮರಿಯಪ್ಪ ರಂಗ ಮಂದಿರ ನವೀಕರಣ ಕಾಮಗಾರಿಗೆ 2 ಕೋಟಿ ರೂ. ಮಂಜೂರಾಗಿದ್ದು, ಶ್ರೀದಲ್ಲೆ ಕಾಮಗಾರಿ ಕೈಗೆತ್ತಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಪುರಸಭೆ ಆವರಣದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ಅದಕ್ಕೆ ಅಗತ್ಯವಿರುವ ಹಣವನ್ನು ಒದಗಿಸಲಾಗುವುದು. ಗ್ರಂಥಾಲಯದ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ತರಬೇತಿ ಕೇಂದ್ರದ ಕೊಠಡಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ರಾಜಣ್ಣ ಮಾಹಿತಿ ನೀಡಿದರು.