ಮದ್ದೂರು: ತಾಲೂಕಿನ ಆತಗೂರು ಹೋಬಳಿಯ 17 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸಿ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ ಶುಕ್ರವಾರ ಏತ ನೀರಾವರಿ ಮೂಲಕ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಭಾಗದ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಲವು ಸಮಸ್ಯೆಗಳಿದ್ದವು. ಕಳೆದೆರಡು ತಿಂಗಳಿಂದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏತ ನೀರಾವರಿ ಯೋಜನೆಗಳಿಗೆ ಪುನಶ್ಚೇತನ ನೀಡಿ ವಿದ್ಯುತ್ ಸಮಸ್ಯೆ ಬಗೆಹರಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಾಯೋಗಿಕವಾಗಿ ಏತ ನೀರಾವರಿಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿ ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಏತ ನೀರಾವರಿಯ ಮೂಲಕ ಆತಗೂರು ಹೋಬಳಿಯ 17, ಕುಣಿಗಲ್ ತಾಲೂಕಿನ 3, ಚನ್ನಪಟ್ಟಣ ತಾಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸಬಹುದಾಗಿದ್ದು, ಬೇಸಿಗೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ಹೇಳಿದರು.
ಕೆರೆಗಳಿಗೆ ನೀರು ತುಂಬಿಸುವುದರಿಂದ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಲಿದೆ. ಮಂಡ್ಯ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ಮದ್ದೂರು ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬರವನ್ನು ಸಮರ್ಥವಾಗಿ ನಿಭಾಯಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚುವುದರ ಜತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಕೆ.ಆರ್. ಮಹೇಶ್, ಮುಖಂಡರಾದ ಗೊರವನಹಳ್ಳಿ ಮಧು, ಆರ್.ಸಿ.ಎಸ್.ಶಿವು, ಯತೀಶ್, ನೀರಾವರಿಯ ಇಲಾಖೆಯ ಇಂಜಿನಿಯರ್‌ಗಳಾದ ನಂಜುಂಡೇಗೌಡ, ಎಚ್.ಸಿ.ನಾಗರಾಜು, ವೆಂಕಟೇಶ್ ಸೇರಿದಂತೆ ಇತರರಿದ್ದರು.