ಮೈಸೂರು: ಮಳೆ ಕೊರತೆ ಉಂಟಾದರೆ ಜನ, ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೈಗೊಳ್ಳಬೇಕಾದ ಯೋಜನೆಗಳ ವರದಿ ನೀಡಿದರೆ ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಅದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರೀಕ್ಷೆಗಿಂತ ಮಳೆ ಕಡಿಮೆ ಆದರೆ ಏನು ಕ್ರಮಕೈಗೊಳ್ಳಬೇಕು ಎನ್ನುವ ಕುರಿತು ಈಗಿನಿಂದಲೇ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ನೀರಿನ ಮಿತ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನಗರದ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಏನು ಮಾಡಬಹುದು ಎನ್ನುವ ಕುರಿತು ಚಿಂತನೆ ನಡೆಸಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ರಮಗಳ ಕುರಿತು ವರದಿ ನೀಡಿ ಎಂದು ಹೇಳಿದರು.
ಕುಡಿಯುವ ನೀರಿನ ಗುಣಮಟ್ಟವನ್ನು ಆಗಾಗ್ಗೆ ಪರೀಕ್ಷೆ ಮಾಡಿ ವರದಿ ನೀಡಬೇಕು. ಕುಡಿಯಲು ಯೋಗ್ಯವಲ್ಲ ಎಂದು ಕಂಡು ಬಂದರೆ ಅಂತಹ ನೀರಿನ ಮೂಲವನ್ನು ಬಂದ್ ಮಾಡಬೇಕು. ಅಗತ್ಯ ಇರುವ ಕಡೆ ಬೋರ್‌ವೆಲ್ ಕೊರೆಸುವ, ಇನ್ನಿತರ ಯೋಜನೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ರಸಗೊಬ್ಬರ ಸಾಗಾಟಕ್ಕೆ ದರ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರೊಂದಿಗೆ ಚರ್ಚಿಸುವಂತೆ ತಿಳಿಸಿದರು.
ಜನ ಜಾಗೃತಿ:
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಆಗಸ್ಟ್ 15 ವರೆಗೆ ಯಾವುದೇ ತೊಂದರೆ ಇಲ್ಲ. ಬಳಿಕವೂ ಮಳೆಯಾಗದಿದ್ದರೆ ನೀರಿನ ತೊಂದರೆ ಆಗಲಿದೆ. ಹಾಗಾಗಿ ಮಳೆ ಕೊರತೆಯಿಂದ ಜಲಮೂಲಗಳು ಬತ್ತುತ್ತಿರುವುದರಿಂದ ಜಿಲ್ಲಾಡಳಿತದಿಂದ ಜನಜಾಗೃತಿಗೆ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 13 ಸ್ಥಳೀಯ ಸಂಸ್ಥೆ, ಮೈಸೂರು ಮಹಾನಗರ ಪಾಲಿಕೆ, 256 ಗ್ರಾಪಂಗಳು ಇವೆ. ಕೆ.ಆರ್. ನಗರ ತಾಲೂಕಿನ ಒಂದು ಗ್ರಾಮದಲ್ಲಿ ನೀರಿಗೆ ತೊಂದರೆಯಾಗಿ ಟ್ಯಾಂಕರ್‌ನಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಈಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಹೀಗಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಯಾವ ಗ್ರಾಮವೂ ಜಿಲ್ಲೆಯಲ್ಲಿಲ್ಲ ಎಂದು ಹೇಳಿದರು.
ಆ. 15 ರವರೆಗೆ ಮಳೆಯಾಗದಿದ್ದರೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೊಳವೆ ಬಾವಿ ಕೊರೆಸುವುದು ಸೇರಿದಂತೆ ಒಟ್ಟು 79 ಕಾಮಗಾರಿಗಳನ್ನು ಕೈಗೊಳ್ಳಬೇಕಾಗುತ್ತದೆ. ಏ. 1 ರಿಂದ ಈ ವರೆಗೆ 148 ಕಡೆ ನೀರಿನ ಕಲಬೆರಕೆ ಆಗಿದೆ. ಈ ಭಾಗದಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿರುವುದು ಕಂಡು ಬಂದಿದ್ದು, ಅಂತಹ ಕಡೆ ನೀರು ಪಡೆಯದಂತೆ ಬಂದ್ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವ ಮೂಲಕ ಹೆಚ್ಚು ಲವಣಾಂಶಯುಕ್ತ ನೀರು ಕುಡಿಯುವುದನ್ನು ತಡೆಗಟ್ಟಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್ ಸುರೇಶಬಾಬು ಮಾಹಿತಿ ನೀಡಿದರು.
ಆಹಾರ ಧಾನ್ಯ ವಿತರಣೆ:
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ ಬಿಪಿಎಲ್ ಪಡಿತರ ಕಾರ್ಡ್‌ದಾರರಿಗೆ 10 ಕೆ.ಜಿ.ಯಂತೆ 22 ಲಕ್ಷ ಯೂನಿಟ್ ಅಗತ್ಯವಿದೆ. ಒಂದು ಯೂನಿಟ್‌ಗೆ ಐದು ಕೆಜಿಯಂತೆ ಆಹಾರ ಧಾನ್ಯ ವಿತರಣೆ ಮಾಡುವುದಾದರೆ ಜಿಲ್ಲೆಗೆ 12 ಸಾವಿರ ಮೆಟ್ರಿಕ್ ಟನ್ ಆಹಾರ ಪದಾರ್ಥ ಬೇಕಾಗಿದೆ. 8,315 ಅರ್ಜಿಗಳು ಬಾಕಿ ಇದ್ದು, ಶೇ.95.18ರಷ್ಟು ಇಕೆವೈಸಿ ಪೂರ್ಣಗೊಂಡಿದೆ. 12 ವರ್ಷದೊಳಗಿನವರ ಹಾಗೂ ವಯಸ್ಸಾದವರ ಇಕೆವೈಸಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಸರ್ಕಾರದಿಂದ 12 ಕೋಟಿ ರೂ. ಬಾಕಿ :
ಜಿಲ್ಲೆಯಲ್ಲಿ 730 ಬಸ್‌ಗಳು ಶಕ್ತಿ ಯೋಜನೆಗೆ ಬಳಕೆಯಾಗುತ್ತಿದೆ. 3 ಲಕ್ಷ ಮಹಿಳೆಯರು ನಿತ್ಯ ಪ್ರಯಾಣಿಸುತ್ತಿದ್ದು, ಜೂ. 11 ರಿಂದ ಜೂ. 29 ರವರೆಗೆ 57 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಸರ್ಕಾರದಿಂದ 12 ಕೋಟಿ ರೂ. ಬರಬೇಕಿದೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ಗಾಯತ್ರಿ, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಡಿಸಿಎಫ್ ಕೆ.ಎನ್. ಬಸವರಾಜು ಇತರರು ಇದ್ದರು.