ಜಿಲ್ಲೆ

ಕುಡಿಯುವ ನೀರಿಗಾಗಿ ಮಹಿಳೆಯರ ಪ್ರತಿಭಟನೆ

ಹನೂರು : ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಮೇಡು ಹಾಗೂ ಏರಿಕಾಡು ಗ್ರಾಮಸ್ಥರು ಗುರುವಾರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಇದಕ್ಕೆ ರೈತ ಸಂಘದ ಪದಾಧಿಕಾರಿಗಳು ಬೆಂಬಲ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ 2 ಗ್ರಾಮದಲ್ಲಿನ ಮಹಿಳೆಯರು, ಮಕ್ಕಳು ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಕಲ್ಲು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ರೈತ ಸಂಘದ ಪದಾಧಿಕಾರಿಗಳ ಜತೆಗೂಡಿ ಖಾಲಿ ಬಿಂದಿಗೆಯೊಂದಿಗೆ ಮೆರವಣಿಗೆಯ ಮೂಲಕ ಗ್ರಾಪಂ ಕಚೇರಿಗೆ ತೆರಳಿ ಧರಣಿ ಕುಳಿತರು. ಈ ಮೂಲಕ ಗ್ರಾಪಂ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಪ್ರತಿಭಟನಕಾರರು ಮಾತನಾಡಿ, ತಾಂಡಮೇಡು ಗ್ರಾಮದಲ್ಲಿ 65 ಕುಟುಂಬಗಳು ಹಾಗೂ ಏರಿಕಾಡು ಗ್ರಾಮದಲ್ಲಿ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳಿದ್ದು, ಕೂಲಿಯನ್ನೇ ಹೆಚ್ಚು ನಂಬಿಕೊಂಡು ಜೀವನವನ್ನು ನಡೆಸುತ್ತಿದ್ದೇವೆ. ಆದರೆ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕಳೆದ 10 ದಿನಗಳಿಂದ ತೀವ್ರವಾಗಿದೆ. ಗ್ರಾಪಂ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಸಾಲುತ್ತಿಲ್ಲ. ಸಮರ್ಪಕವಾಗಿ ನೀರು ಪೂರೈಸುವಂತೆ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಕುಡಿಯುವ ನೀರಿಗಾಗಿ ಬಿಂದಿಗೆಯನ್ನಿಡಿದು ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಡಬಾರದ ಕಷ್ಟ ಪಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಚನ್ನೇಶ್ ಸ್ಥಳಕ್ಕಾಗಮಿಸಿ ಮಾತನಾಡಿ, ಈ ಬಗ್ಗೆ ಅಗತ್ಯ ಕ್ರಮವಹಿಸಿ ಸಮಸ್ಯೆಯಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಒಂದು ವೇಳೆ ನೀರಿನ ಸಮಸ್ಯೆ ಮತ್ತೆ ಮರುಕಳಿಸಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ನೀಡಿ ಪ್ರತಿಭಟನೆ ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅರ್ಪುದರಾಜು, ಮೈಕಲ್, ದಿವ್ಯಾನಂದ್, ಮಹಿಳೆಯರಾದ ಉಷಾ, ಉಮಾ, ಜಯಾ, ಸುಜಾತಾ, ವೀರಮ್ಮ, ಮರಿಯಮ್ಮ, ಸುಶೀಲಾ, ಮುನಿಯಮ್ಮ, ಧನಸೆಲ್ವಿ, ನಿಶಾ, ರಾಧಾ, ಪಾಪತ್ತಿ, ಕುಮಾರಿ, ಪೊನ್ನಿ ಇನ್ನಿತರರು ಇದ್ದರು.