ಹುಮನಾಬಾದ್: ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಇಂದಿರಾನಗರ ಸೇರಿ ಇತರ ಬಡಾವಣೆ ನಿವಾಸಿಗಳು ಶನಿವಾರ ಪಟ್ಟಣದ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
ಕಳೆದ ೧೫ ದಿನಗಳಿಂದ ಇಂದಿರಾನಗರ, ಶಿವಪುರ, ಧನಗರಗಡ್ಡ ಬಡಾವಣೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡದೆ ಇರುವುದರಿಂದ ಸಾರ್ವಜನಿಕರು ಪರಿತಪ್ಪಿಸುವಂತಾಗಿದೆ. ಪುರಸಭೆ ಆಡಳಿತದ ಕ್ರಮಕ್ಕೆ ತೀವ್ರ ಅಕ್ರೋಶ ವ್ಯಕ್ತಪಡಿಸಿ ಸಂಬಂಧಿತರು ಕೂಡಲೇ ಗಮನ ಹರಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಷಯ ತಿಳಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಿ, ತಕ್ಷಣವೇ ಕ್ರಮಕೈಗೊಂಡು ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಮೀನಾಕುಮಾರಿ ಅವರಿಗೆ ಸೂಚಿಸಿದರು.
ಪ್ರಮುಖರಾದ ಲಕ್ಷ್ಮೀಪುತ್ರ ಮಾಳಗೆ, ಗಣಪತಿ ಅಷ್ಟೂರೆ, ಗೌತಮ ಮೇಟಿ, ಮಾಣಿಕ ಮೇಟಿ, ಮನೋಜ ಜಾನವೀರ್, ಗೌತಮ ಜಾನವೀರ್, ಲಕ್ಷ್ಮಣ ಜಾನವೀರ್, ರಾಹುಲ್ ಬೋಧೆ , ವಿಶಾಲ ಸಿಂಧನಕೇರಾ, ಸಂಜುಕುಮಾರ ಗರ್ಜಿ, ಓಂಕಾರ ಜಂಜೀರ, ಗೌತಮ ಮೊಳಕೆರೆ, ಸಾಗರ ಬೂತಗಿ, ಪ್ರೇಮಕುಮಾರ ಜಾನವೀರ್, ಕರಣ ಜಾನವೀರ್, ಆಕಾಶ ಸಿಂಧೆ, ಶಾಂತಮ್ಮ ಸಾಗರ, ಚಂದ್ರಮ್ಮ ಜಾನವೀರ್, ಸರಸ್ವತಿ ಔರಾದ್, ಶೋಭಾವತಿ ಜಾನವೀರ್, ಮಾನೆಮ್ಮ ಜಾನವೀರ್, ಶಾಂತಮ್ಮ ಇತರರು ಪಾಲ್ಗೊಂಡಿದ್ದರು. ಆರಂಭದಲ್ಲಿ ಬಡಾವಣೆಯಿಂದ ಪ್ರಮುಖ ರಸ್ತೆಯ ಮೂಲಕ ಪುರಸಭೆವರೆಗೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.