ಜಿಲ್ಲೆ

ಕುಡಿಯುವ ನೀರಿಗಾಗಿ ಕಾಂಗ್ರೆಸ್ ಸರ್ಕಾರದಿಂದ ರಾಜಕೀಯ:ಎಚ್. ಡಿ. ರೇವಣ್ಣ

ಹಾಸನ: ಕಾಂಗ್ರೆಸ್ ಸರ್ಕಾರವು ಕುಡಿಯುವ ನೀರಿನ ವಿಚಾರಕ್ಕೆ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ನೀರು ಕೊಡಿ ನಮ್ಮದೇನು ತಕರಾರಿಲ್ಲ ಆದರೆ ನಮ್ಮ ಜಿಲ್ಲೆಯ ಜನರಿಗೆ ಕುಡಿಯಲು ನೀರು ಕೊಡದೆ ಚುನಾವಣೆಗೆ ತುಮಕೂರಿಗೆ ನೀರು ಬಿಡುತ್ತಿದ್ದಾರೆ.ನಮ್ಮ ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಈ ಬಗ್ಗೆ ಡಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿ,ಮಾಜಿ ಪ್ರಧಾನಿ ದೇವೇಗೌಡರ ಗಮನಕ್ಕೂ ತರಲಾಗಿದ್ದು ಎಲ್ಲಾ ರೈತ ಮುಖಂಡರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಇಂದು ಬೆಳಗ್ಗೆ ಗೊರೂರು ಹೇಮಾವತಿ ಡ್ಯಾಂ ಹಾಗೂ ಚೀಫ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ ಅವರು, ಹೋರಾಟದಲ್ಲಿ ಹೆಚ್ಚು ಕಮ್ಮಿಯಾಗಿ ಘಟನೆಯಾದರೆ ಡಿಸಿ ಎಸ್ಪಿ ನೇರ ಹೊಣೆ ಎಂದರು. ಹಾಸನ, ಮಂಡ್ಯ, ಕೆ. ಆರ್ ಪೇಟೆಯಲ್ಲಿ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ನಮ್ಮ ರೈತರು ನಾಟಿ ಮಾಡಿ ಎರಡು ವರ್ಷ ಆಯ್ತು, ಬೆಳೆಯೂ ಬಂದಿಲ್ಲ, ಬೆಳೆ ನಷ್ಟ ಪರಿಹಾರವೂ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಎರಡು ಬಾರಿ ನೀರು ಹರಿಸಿದ್ದಾರೆ. ನನ್ನ ಅಭಿಪ್ರಾಯವನ್ನು ನೀರಾವರಿ ಸಲಹಾ ಸಮಿತಿಗೆ ಪತ್ರದ ಮೂಲಕ ಬರೆದಿದ್ದೇನೆ. ನಾವು ಕುಡಿಯಲು ನೀರು ಕೇಳುತ್ತಿದ್ದೇವೆ. ಎಚ್‌ಆರ್‌ಬಿಸಿ ಎರಡು ನಾಲೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಹೇಮಾವತಿ ಜಲಾಶಯ ಮತ್ತು ನಾಲೆಗಳ ಸುತ್ತಮುತ್ತಲ ಪ್ರದೇಶದಲ್ಲಿ 144 ಸೆಕ್ಷನ್ ಹಾಕಿ ಎಮರ್ಜನ್ಸಿ ಹೇರಿದ್ದಾರೆ . ಕುಡಿಯುವ ನೀರಿಗೆ ನಮ್ಮ ಪಕ್ಷ ರೈತರ ಜೊತೆ ಬೀದಿಗಿಳಿದು ಹೋರಾಟ ಮಾಡಲಾಗುವುದು. ಈ ಬಗ್ಗೆ ಕೋರ್ಟ್ ಮೊರೆ ಹೋದರೆ ಅದರ ಕಥೆಯೇ ಬೇರೆಯಾಗುತ್ತಿದೆ.ರೈತರಿಗೆ ಬೆಳೆ ಬೆಳೆಯಲು ಸರಿಯಾದ ವಿದ್ಯುತ್ ನೀಡುತ್ತಿಲ್ಲ. ಸಚಿವರು 8 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಾರೆ ಆದರೆ ಒಂದು ತಾಸು ಕೂಡ ವಿದ್ಯುತ್ ಬರುತ್ತಿಲ್ಲ ಎಂದು ಆರೋಪಿಸಿದರು.
ಡಿಎಂಎಫ್‌ಗೆ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದರೂ ಸಹ ಆರು ತಿಂಗಳಿನಿಂದ ಡಿಎಂಎಫ್‌ನಲ್ಲಿರುವ ಹಣ ಕೊಡುತ್ತಿಲ್ಲ. ಏಕೆ ದುಡ್ಡು ಕೊಡದೆ ಇಟ್ಟುಕೊಂಡಿದ್ದೀರಿ? ಅಂಗನವಾಡಿ ರಿಪೇರಿಗೆ ದುಡ್ಡು ಕೊಡ್ತಿಲ್ಲ, ಆ ಹಣವನ್ನು ಏಕೆ ಇಟ್ಟುಕೊಂಡಿದ್ದಾರಾ ? ಕೂಡಲೇ ಹಣವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಬೇಕು ಹಾಗೂ ಅಂಗನವಾಡಿ ಹುದ್ದೆ ಖಾಲಿ ಇದೆ, ಹುದ್ದೆ ಭರ್ತಿ ಮಾಡಿ, ಏಕೆ ಕಾಯುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಡಾ.ಮಂಜುನಾಥ್ ಸ್ಪರ್ಧೆ ಎರಡೂ ಪಕ್ಷಗಳ ತೀರ್ಮಾನ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಡಾ.ಸಿ.ಎನ್. ಮಂಜುನಾಥ್ ಅವರ ಸ್ಪರ್ಧೆ ಕುರಿತು ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ನಮ್ಮ ಜೆಡಿಎಸ್ ಪಕ್ಷದ ಮುಖಂಡರು ಕುಳಿತು ತೀರ್ಮಾನ ಮಾಡಿದ್ದಾರೆ ಎಂದು ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಜುನಾಥ್ ಅವರು ಒಳ್ಳೆಯ ಸೇವೆ ಮಾಡಿದ್ದಾರೆ, ಕಳೆದ 17ವರ್ಷದಿಂದ ಅವರದ್ದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ನಿಲ್ಲಲೇಬೇಕು ಎಂದು ಎಲ್ಲರೂ ಒತ್ತಾಯ ಮಾಡಿದರು. ಇನ್ನೂ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಈ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು? ಕುಮಾರಣ್ಣ ನಿಮ್ಮ ಪಾದಗಳಿಗೆ ನಮಸ್ಕಾರಗಳು . ಐದು ವರ್ಷ ನೀವೇ ಸಿಎಂ ಎಂದರು. ದೇವೇಗೌಡರು, ಕುಮಾರಣ್ಣ ಪಾದಗಳಿಗೆ ಕಾಂಗ್ರೆಸ್ ಪಕ್ಷವನ್ನು ಇಡುತ್ತೇವೆ ಎಂದು ಬಂದರು.