ಮಂಜುನಾಥ ಟಿ.ಭೋವಿ ಮೈಸೂರು
ಮಾಮೂಲಿ ಹಾಲು ಬೇಡ, ಈ ಹಿಂದಿನಂತೆ ಏಲಕ್ಕಿ ಅಥವಾ ಚಾಕೊಲೇಟ್ ಸುವಾಸಿತ ಹಾಲು ಕೊಡಿ…
ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳು ಸರ್ಕಾರದ ಮುಂದಿಟ್ಟಿರುವ ಬೇಡಿಕೆ ಇದು. ಸಾಮಾನ್ಯ ಹಾಲು ನಾಲಿಗೆಗೆ ರುಚಿಸುತ್ತಿಲ್ಲ. ಆದ್ದರಿಂದ ಈ ಹಿಂದಿನಂತೆ ಏಲಕ್ಕಿ ಅಥವಾ ಚಾಕೊಲೇಟ್ ಫ್ಲೇವರ್ ಹಾಲು ಕೊಡಬೇಕು ಎಂಬುದು ಮಕ್ಕಳ ಆಗ್ರಹವಾಗಿದೆ.
ಶಾಲಾ ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಶ್ಯವಿರುವ ಪೌಷ್ಟಿಕ ಆಹಾರವನ್ನು ಒದಗಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿದೆ. ಅದಕ್ಕಾಗಿ ಜಾರಿಗೆ ತಂದ ‘ಕ್ಷೀರಭಾಗ್ಯ’ ಯೋಜನೆಗೆ ಅಗತ್ಯವಾದ ಕೆನೆಭರಿತ ಹಾಲಿನ ಪುಡಿಯನ್ನು ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಶಾಲೆಗಳಿಗೆ ಸರಬರಾಜು ಮಾಡುತ್ತಿದೆ. 2013ರಿಂದಲೇ ಈ ಯೋಜನೆ ಜಾರಿಯಲ್ಲಿ ಇದೆ.
1 ರಿಂದ 10ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲ ಮಕ್ಕಳಿಗೆ ತಲಾ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲನ್ನು ನಿತ್ಯ ಕೊಡಲಾಗುತ್ತಿದೆ. ಇದಕ್ಕೆ ಈಗಲೂ ಉತ್ತಮ ಸ್ಪಂದನೆ ಇದೆ. ಇದರೊಂದಿಗೆ, ಏಲಕ್ಕಿ ಅಥವಾ ಚಾಕೊಲೇಟ್ ಸುವಾಸಿತ ಹಾಲು ನೀಡುವುದನ್ನು ಮತ್ತೆ ಆರಂಭಿಸಬೇಕು ಎಂದು ಮಕ್ಕಳು ಕೇಳುತ್ತಿದ್ದಾರೆ.
ಕರೊನಾಕ್ಕೂ ಮುನ್ನ ಸ್ಥಗಿತ:
ಚಾಕೊಲೇಟ್ ಹಾಗೂ ಏಲಕ್ಕಿ ಸುವಾಸಿತ ಹಾಲು ನೀಡಬೇಕೆಂಬ ಸಲಹೆ ಮಕ್ಕಳಿಂದ ಈ ಹಿಂದೆ ವ್ಯಕ್ತವಾಗಿತ್ತು. ಅದಕ್ಕೆ ಸ್ಪಂದಿಸಿದ್ದ ಅಂದಿನ ಸರ್ಕಾರ, ಸುವಾಸಿತ ಹಾಲು ನೀಡುವ ಕಾರ್ಯಕ್ರಮವನ್ನು ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಾಡಿತ್ತು. ಅದು ಮಕ್ಕಳಿಗೆ ಇಷ್ಟವಾಗಿತ್ತು. ಹೀಗಾಗಿ, ನಂತರ ಸುವಾಸಿತ ಹಾಲು ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಯಿತು. ಪ್ರತಿ ಮಗುವಿಗೆ ವಾರದಲ್ಲಿ 3 ದಿನ ಚಾಕೋಲೇಟ್ ಹಾಗೂ 2 ದಿನ ಏಲಕ್ಕಿ ಸುವಾಸಿತ ಹಾಲನ್ನು ನೀಡಲಾಗುತ್ತಿತ್ತು. ಈ ನಡುವೆ, ಕರೊನಾ ಕಾಲದಲ್ಲಿ ಶಾಲೆಗಳು ಮುಚ್ಚಿದ್ದವು. ಅದರೊಂದಿಗೆ, ಫ್ಲೇವರ್ ಹಾಲು ವಿತರಣೆಯನ್ನೂ ಎರಡು ವರ್ಷದಿಂದ ಸ್ಥಗಿತಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲೂ ಮಾಮೂಲಿ ಹಾಲನ್ನೇ ನೀಡಲಾಗುತ್ತಿದೆ.
ಹಾರ್ಲಿಕ್ಸ್, ಬೋರ್ನ್‌ವೀಟಾ ತರ್ತಾರೆ…:
ನಿತ್ಯ ಮನೆಯಲ್ಲೂ ಮಾಮೂಲಿ ಹಾಲು ಕುಡಿಯುವ ಮಕ್ಕಳು, ಶಾಲೆಯಲ್ಲೂ ಅದನ್ನೇ ಕುಡಿಯಬೇಕಿದೆ. ಹೀಗಾಗಿ ಮಕ್ಕಳ ನಾಲಿಗೆಗೆ ಈ ಹಾಲು ರುಚಿಸುತ್ತಿಲ್ಲ. ಇದರಿಂದಾಗಿ ಶೇ.2ರಿಂದ 3ರಷ್ಟು ಮಕ್ಕಳು ಹಾಲನ್ನು ತಿರಸ್ಕರಿಸುತ್ತಾರೆ, ಇಲ್ಲವೇ ಅರ್ಧ ಕುಡಿದು ಉಳಿದದ್ದನ್ನು ಬಿಟ್ಟುಬಿಡುತ್ತಾರೆ. ಇನ್ನೂ ಕೆಲವು ಮಕ್ಕಳು ಮನೆಯಿಂದಲೇ ತಮಗೆ ಇಷ್ಟವಾದ ಫ್ಲೇವರ್ ತಂದಿರುತ್ತಾರೆ. ಶಾಲೆಯಲ್ಲಿ ನೀಡಲಾಗುವ ಹಾಲಿಗೆ ಹಾರ್ಲಿಕ್ಸ್, ಬೋರ್ನ್‌ವೀಟಾದಂತಹ ನ್ಯೂಟ್ರಿಷಿಯನ್ ಪುಡಿಯ ಫ್ಲೇವರ್ ಹಾಕಿಕೊಂಡು ಕುಡಿಯುತ್ತಾರೆ. ಪ್ರೌಢಶಾಲಾ ಹಂತದ ಮಕ್ಕಳು ಹೀಗೆ ಮಾಡುತ್ತಾರೆ. ಸಣ್ಣ ಮಕ್ಕಳಿಗೆ ಇದೆಲ್ಲ ಗೊತ್ತಾಗುವುದಿಲ್ಲ ಎನ್ನುತ್ತಾರೆ ಶಾಲಾ ಶಿಕ್ಷಕರೊಬ್ಬರು.
ಚಾಕೊಲೇಟ್ ಹಾಲು ಮಕ್ಕಳಿಗೆ ಇಷ್ಟ:
ಈಗಲೂ ಮಕ್ಕಳಿಂದ ಚಾಕೊಲೇಟ್ ಸುವಾಸಿತ ಹಾಲಿಗೆ ಬಲು ಬೇಡಿಕೆ ಇದ್ದು, ಅದೇ ಹಾಲನ್ನು ಕೇಳುತ್ತಾರೆ. ಇದೊಂದಿದ್ದರೆ ಸಾಕು, ಬೇರೆ ರೀತಿಯ ಸುವಾಸಿತ ಹಾಲನ್ನು ಅಷ್ಟಾಗಿ ಕೇಳುವುದಿಲ್ಲ. ಚಿಣ್ಣರು ಮೊದಲೇ ಚಾಕೊಲೇಟ್ ಪ್ರಿಯರು. ಇದುವೇ ಅವರ ಮೊದಲ ಆಯ್ಕೆಯಾಗಿರುತ್ತದೆ. ಶಾಲೆಯಲ್ಲೂ ಚಾಕೊಲೇಟ್ ಸುವಾಸಿತ ಹಾಲನ್ನೇ ಕೇಳುತ್ತಿರುವುದರಲ್ಲಿ ಅಚ್ಚರಿ ಇಲ್ಲ. ಹಳ್ಳಿಗಳಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಪಾಲಕರಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಪ್ರತಿಯೊಂದು ಮಗುವಿಗೂ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಹಾಲನ್ನು ಸರ್ಕಾರ ಒದಗಿಸುತ್ತಿದೆ. ಇದೀಗ ಸುವಾಸಿತ ಹಾಲು ನೀಡಲು ಮಕ್ಕಳಿಂದ ಬೇಡಿಕೆ ಬಂದಿದೆ. ಇದಕ್ಕೆ ಸರ್ಕಾರ, ಶಿಕ್ಷಣ ಇಲಾಖೆ ಕಿವಿಗೊಡಬೇಕಾಗಿದೆ.
ನಿತ್ಯ 8 ಲಕ್ಷ ಲೀಟರ್ ಹಾಲು ವಿತರಣೆ
ಕ್ಷೀರಭಾಗ್ಯ ಯೋಜನೆ ಇದೀಗ 9 ವರ್ಷ ಪೂರೈಸಿದೆ. 1.04 ಕೋಟಿ ಮಕ್ಕಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದ 55,683 ಶಾಲೆಗಳಲ್ಲಿರುವ 64 ಲಕ್ಷ ಮಕ್ಕಳಿಗೆ ಮತ್ತು 64 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿರುವ 40 ಲಕ್ಷ ಮಕ್ಕಳಿಗೆ ಹಾಲು ಕೊಡಲಾಗುತ್ತಿದೆ. ನಿತ್ಯ ಶಾಲೆಗಳಿಗೆ 5 ಲಕ್ಷ ಲೀಟರ್, ಅಂಗನವಾಡಿಗಳಿಗೆ 3 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಸರಬರಾಜು ಮಾಡುತ್ತದೆ. ಒಂದು ಬಾರಿ ಒಂದು ಮಗುವಿಗೆ ಅಂದಾಜು 5.25 ರೂ. ವೆಚ್ಚ ತಗಲುತ್ತದೆ.
ಏಲಕ್ಕಿ ಮತ್ತು ಚಾಕೊಲೇಟ್ ಸುವಾಸಿತ ಹಾಲು ಬಾಯಿಗೆ ರುಚಿಸುತ್ತದೆ. ಕುಡಿಯಲು ಇಷ್ಟಾಗುತ್ತದೆ. ಇನ್ನಷ್ಟು ಕುಡಿಯಲು ಮನಸ್ಸಾಗುತ್ತದೆ. ನನ್ನ ಸಹಪಾಠಿಗಳಿಗೂ ಹೀಗೆ ಅನಿಸುತ್ತದೆ. ಆದ್ದರಿಂದ ಸುವಾಸಿತ ಹಾಲನ್ನೇ ನೀಡಿದರೆ ನಮಗೆ ಹಿಡಿಸುತ್ತದೆ.ಎಸ್.ಸಂಜು, 5ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕರಹಳ್ಳಿ, ಮೈಸೂರು
ಶಾಲೆಯಲ್ಲಿ ಈಗ ಕೊಡುತ್ತಿರುವ ಮಾಮೂಲಿ ಹಾಲು ಸಹ ಚೆನ್ನಾಗಿದೆ. ನಮಗೆ ರುಚಿಸುತ್ತಿದೆ. ಏಲಕ್ಕಿ, ಚಾಕೊಲೇಟ್ ಸುವಾಸಿತ ಹಾಲು ನೀಡಿದರೆ ಇನ್ನಷ್ಟು ಇಷ್ಟವಾಗುತ್ತದೆ. ಕುಡಿಯಲು ಸಂತೋಷವಾಗುತ್ತದೆ. ಹೀಗಾಗಿ, ಅದನ್ನೇ ಕೊಡಲು ಸರ್ಕಾರದವರು ಮನಸ್ಸು ಮಾಡಬೇಕಷ್ಟೇ.ಎಸ್.ದರ್ಶಿನಿ ಮತ್ತು ಎಸ್.ಅಮೃತ್, 7ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕರಹಳ್ಳಿ, ಮೈಸೂರು
ಕರೊನಾಕ್ಕೂ ಮುನ್ನ ಏಲಕ್ಕಿ ಅಥವಾ ಚಾಕೊಲೇಟ್ ಸುವಾಸಿತ ಹಾಲು ಶಾಲೆಗೆ ಬರುತ್ತಿತ್ತು. ಇದೀಗ ಸ್ಥಗಿತವಾಗಿದ್ದು, ಮಾಮೂಲಿ ಹಾಲನ್ನೇ ಮಕ್ಕಳಿಗೆ ನೀಡಲಾಗುತ್ತಿದೆ. ಏಲಕ್ಕಿ, ಚಾಕೊಲೇಟ್ ಫ್ಲೇವರ್ ಹಾಲಿಗೆ ಮಕ್ಕಳಿಂದ ಬೇಡಿಕೆ ಇದೆ.ಎಚ್.ಮಹದೇವು, ಮುಖ್ಯಶಿಕ್ಷಕ ಮೈಸೂರು
ಶಾಲಾ ಮಕ್ಕಳಿಗೆ ಏಲಕ್ಕಿ ಅಥವಾ ಚಾಕೊಲೇಟ್ ಸುವಾಸಿತ ಹಾಲಿನ ವಿತರಣೆ ಮಾಡುತ್ತಿಲ್ಲ. ಬದಲಿಗೆ ಮಾಮೂಲಿ ಹಾಲನ್ನೇ ನೀಡಲಾಗುತ್ತಿದೆ. ಇದರಿಂದ ಏನೂ ಸಮಸ್ಯೆ ಆಗಿಲ್ಲ.ರಾಮಚಂದ್ರರಾಜೇ ಅರಸ್, ಡಿಡಿಪಿಐ ಮೈಸೂರು