ಜಿಲ್ಲೆ

ಕುಡಿಯಲು ಯೋಗ್ಯವಲ್ಲದ ಟ್ಯಾಂಕರ್ ನೀರು, ನಡುರಾತ್ರಿಯಲ್ಲಿ ನೀರಿಗಾರಿ ಕಾದು ನಿಲ್ಲುವ ಜನತೆ, ಸುಗ್ಗಯ್ಯಪಾಳ್ಯ ಗ್ರಾಮಸ್ಥರ ತಪ್ಪದ ಬವಣೆ

ದಾಬಸ್‌ಪೇಟೆ: ಸೋಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗ್ಗಯ್ಯಪಾಳ್ಯ ಗ್ರಾಮದಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದ್ದು, ನಡುರಾತ್ರಿಯಲ್ಲಿ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಗ್ಗಯ್ಯಪಾಳ್ಯದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿದ್ದು, 2 ವರ್ಷಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಆದ್ದರಿಂದ ಕಿಲೋಮೀಟರ್‌ಗಟ್ಟಲೇ ನಡೆದುಕೊಂಡು ಹೋಗಿ ನೀರು ತರುವುದು ಅನಿವಾರ್ಯವಾಗಿದೆ. ಅಷ್ಟು ದೂರ ನಡೆದು ಹೋಗಲು ಅಶಕ್ತರಾದ ವೃದ್ಧರು ಹನಿ ನೀರಿಗಾಗಿ ಇತರರನ್ನು ಅವಲಂಬಿಸಬೇಕಾಗಿದೆ.

ವಾರಕ್ಕೊಮ್ಮೆ ಟ್ಯಾಂಕರ್ ನೀರು: ಗ್ರಾಮಕ್ಕೆ ವಾರಕ್ಕೊಮ್ಮೆ ಎರಡು ಅಥವಾ ಮೂರು ಟ್ಯಾಂಕರ್ ನೀರು ಪೂರೈಸಲಾಗುತ್ತದೆ. ಈ ನೀರು ಕೂಡ ಕುಡಿಯಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದ, ಈ ನೀರನ್ನು ಇತರ ಕಾರ್ಯಗಳಿಗೆ ಮಾತ್ರ ಬಳಸುತ್ತಿದ್ದು, ಕುಡಿಯುವ ನೀರಿಗಾಗಿ ಇತರರ ಜಮೀನಿನ ಬೋರ್‌ವೆಲ್‌ಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಪಂಚಾಯಿತಿಯಿಂದ ಬೋರ್‌ವೆಲ್ ಕೊರೆಸಲು ಮನವಿ ಮಾಡಿದ್ದರೂ, ಗ್ರಾಪಂ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ನಿವಾಸಿ ಗೌರಮ್ಮ ಅಲವತ್ತುಕೊಂಡಿದ್ದಾರೆ.

ಸುಗ್ಗಯ್ಯನಪಾಳ್ಯದಲ್ಲಿ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಬೋರ್‌ವೆಲ್ ರಿಪೇರಿ ಮಾಡಿಸಲಾಗುವುದು. ಜನರಿಗೆ ಸಮಸ್ಯೆಯಾಗದಂತೆ ಪ್ರತಿನಿತ್ಯ ಟ್ಯಾಂಕರ್ ನೀರನ್ನು ಪೂರೈಸಲಾಗುವುದು. ಎ.ಎಂ. ರವಿಶಂಕರ್, ಪಿಡಿಒ