ಜಿಲ್ಲೆ

ಕುಟುಂಬಸ್ಥರಿಗೆ ಧೈರ್ಯ ತುಂಬಿದ ರಘುಮೂರ್ತಿ

ಚಿತ್ರದುರ್ಗ: ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ಜೋಡಿ ಕೊಲೆಯಾದ ಕುಟುಂಬಸ್ಥರನ್ನು ಭಾನುವಾರ ಭೇಟಿ ಮಾಡಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಧೈರ್ಯ ತುಂಬಿದರು.

ನಂತರ ಮಾತನಾಡಿದ ಅವರು, ಗ್ರಾಮದಲ್ಲಿ ನಡೆದ ದುರ್ಘಟನೆ ತುಂಬಾ ನೋವಿನ ಸಂಗತಿ. ಇದು ಯಾವ ಗ್ರಾಮದಲ್ಲೂ ಮರುಕಳಿಸಬಾರದು ಎಂದರು.

ಗ್ರಾಮದ ಹನುಮಂತಪ್ಪ, ಆತನ ಪತ್ನಿ ತಿಪ್ಪಮ್ಮ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಯಾರೇ ಈ ಕೊಲೆಗಳನ್ನು ಮಾಡಿದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನಷ್ಟು ತನಿಖೆ ಕೈಗೊಂಡು ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲಿದ್ದಾರೆ ಎಂದು ತಿಳಿಸಿದರು.

ಕಾನೂನು ಎಲ್ಲರಿಗೂ ಒಂದೇ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಮಾತನಾಡಿದ್ದು, ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನೊಂದ ಕುಟುಂಬಕ್ಕೆ ಖಂಡಿತ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ಸೌಲಭ್ಯದ ಭರವಸೆ: ಹಿರಿಯ ಪುತ್ರಿಗೆ ತಾತ್ಕಾಲಿಕ ಉದ್ಯೋಗ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಸೌಲಭ್ಯ, ಕಿರಿಯ ಪುತ್ರಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ಮುಖಂಡರಾದ ಸುಭಾಷ್ ರೆಡ್ಡಿ, ಉಮೇಶ್, ಗೋಪಾಲರೆಡ್ಡಿ, ಜಯಣ್ಣ, ಮಲ್ಲಿಕಾರ್ಜುನ, ಗ್ರಾಮಸ್ಥರಿದ್ದರು.