ಜಿಲ್ಲೆ

ಕುಟುಂಬದಿಂದಲೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು:ಶೈಲಜಾ ಹಾಸನ

ಹಾಸನ:ಇಂದಿನ ಸಮಾಜದಲ್ಲಿ ಕ್ರೌರ್ಯ, ಅನೈತಿಕತೆ, ಅರಾಜಕತೆ ತುಂಬಿ ತುಳುಕುತ್ತಿದೆ. ಕುಟುಂಬವು ಮೌಲ್ಯ, ನೈತಿಕತೆ, ಸಂಸ್ಕಾರ ಕಲಿಸುತ್ತಿದ್ದ ಹಿರಿಯರನ್ನು ದೂರ ಇಟ್ಟಿದೆ. ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ತಾಯಂದಿರು ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ. ಕುಟುಂಬದಿಂದಲೇ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮತ್ತಷ್ಟು ಜಾಗೃತವಾಗಬೇಕು ಎಂದು ಅಖಿಲ ಭಾರತ ಸ್ಪಂದನ ಸಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ಶೈಲಜಾ ಹಾಸನ ಅವರು ಹೇಳಿದರು.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಹದಿಮೂರನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಸ್ಪಂದನ ಸಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಇಂತಹ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತರುವ ಪ್ರಯತ್ನಗಳು ನಡೆಯಬೇಕು. ವಚನ ಸಾಹಿತ್ಯ ಅಂದಿನ ಸಮಾಜವನ್ನು ಬದಲಾಯಿಸುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡಿದೆ. ಅಂತಹ ಸಾಹಿತ್ಯದತ್ತ ಸಮುದಾಯ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಸ್ಪಂದನ ಸರಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷರಾದ ಕಲಾವತಿ ಮಧುಸೂದನ್ ಮಾತನಾಡಿ, ಇಂದು ಈ ರೀತಿಯ ಸಮ್ಮೇಳನಗಳು ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರವೂ ಮುಖ್ಯವಾಗುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿ ವಲಯದೊಂದಿಗೆ ಎಲೆ ಮರೆಯಲ್ಲಿಯೇ ಸಾಮಾಜಿಕ ಸುಸ್ಥಿರತೆಗಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರ ಪರಿಚಯ ಮಾಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಹಾಗು ಅವರ ಅನನ್ಯ ಸೇವೆಗೆ ಸಣ್ಣ ಗೌರವವನ್ನು ಸಲ್ಲಿಸುವ ಕಾರ್ಯ ಇದಾಗಿದ್ದು, ಅವರ ಸೇವಾ ಕಾರ್ಯಕ್ಕೆ ಸಹಕರಿಸುವ ಮೂಲಕ ಅವರ ಪುಣ್ಯದಲ್ಲಿ ಸಣ್ಣ ಪಾಲುದಾರರಾಗುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಎಲೆ ಮರೆಯ ಕಾಯಿಗಳು’ ಎಂಬ ಪುಸ್ತಕ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪ್ರೊ.ಮಲ್ಲೇಶ್ ಗೌಡ ಅವರು ಮಾದರಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಕವಿಗೋಷ್ಠಿ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ ಡಾ. ಸೋಮೇಶ್ವರ ಸ್ವಾಮೀಜಿ, ಯೋಗ ಗುರು ಚೇತನ್ ಗುರೂಜಿ, ಆಕಾಶವಾಣಿ ಮುಖ್ಯಸ್ಥ ಡಾ. ವಿಜಯ ಅಂಗಡಿ, ರಾಜಶ್ರೀ ಥಳಂಗೆ, ಸರೋಜಾ ಸ್ವಾಮಿ, ನಗರಸಭೆ ಅಭಿಯಂತರರಾದ ಕವಿತಾ, ಶಿವಕುಮಾರ ಜಾಗಟೆ, ಸಾಹಿತಿಗಳಾದ ವಿ.ಬಿ. ಕುಳಮರ್ವ, ಶಿರಸಿ ವಿಮಲಾ ಭಾಗ್ವತ್, ವಿಜಯಾ ಶೆಟ್ಟಿ, ಲಕ್ಷ್ಮೀ ರಘುನಂದನ್, ರಾಜೇಶ್ವರಿ ಹುಲ್ಲೇನಹಳ್ಳಿ, ಸುಶೀಲಾ ಸೋಮಶೇಖರ್, ನಾಗರಾಜ ದೊಡ್ಡಮನಿ ಉಪಸ್ಥಿತರಿದ್ದರು.