ಹಾಸನ: ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಜಾಗೃತಿ ಮೂಡಿಸಿದರೆ ಕೌಟುಂಬಿಕ ದೌರ್ಜನ್ಯ ನಿಯಂತ್ರಣ ಮಾಡಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದೌರ್ಜನ್ಯ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ದೌರ್ಜನ್ಯ ಪ್ರಕರಣಗಳೇ ಇರುವುದಿಲ್ಲ. ದೌರ್ಜನ್ಯ ತಡೆ ಬಗ್ಗೆ ಕುಟುಂಬದ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸುವ ಕೆಲಸಗಳು ಆಗಬೇಕಿದೆ. ಚಿಕ್ಕ ವಯಸ್ಸಿನಲ್ಲೇ ಸಮಾಜದಲ್ಲಿ ತಮ್ಮ ಜವಾಬ್ದಾರಿ ಹಾಗೂ ನಡವಳಿಕೆ ಬಗ್ಗೆ ತಿಳಿಸಿಕೊಡುವ ಕೆಲಸಗಳು ಆಗಬೇಕಿದೆ ಎಂದರು.
ಗಂಡನನ್ನು ಬಿಟ್ಟು ಬಂದರೆ ನಾವು ನೋಡಿಕೊಳ್ಳುತ್ತೇವೆ ಎಂಬ ಪೋಷಕರ ಸಂಖ್ಯೆ ಕಡಿಮೆಯಾಗಬೇಕು. ತನ್ನ ಜವಾಬ್ದಾರಿಯೊಂದಿಗೆ ಗಂಡನ ಜತೆ ಹೇಗೆ ಅನುಸರಿಸಿಕೊಂಡು ಬದುಕಬೇಕು ಎಂಬುದನ್ನು ಪೋಷಕರು ತಿಳಿಸಿಕೊಡಬೇಕು. ಇಂತಹ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರು ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು. ಕಾನೂನು ಇರುವುದು ಎಲ್ಲರ ರಕ್ಷಣೆಗೆ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸಗಳು ಎಂದಿಗೂ ಆಗಬಾರದು. ಆದ್ದರಿಂದ ಶಿಕ್ಷಣದ ಜೆ ಸಂಸ್ಕಾರವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಆಗುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಿಯಂತ್ರಣ ಆಗಬೇಕಾದರೆ ಮನೆಯ ಹಂತದಲ್ಲೇ ಗಂಡು ಹಾಗೂ ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಗೌರವ ಕೊಡುವ ನೀತಿ ಪಾಠ ಕಲಿಸಬೇಕು. ಶಾಲೆಯಲ್ಲಿ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಅದರ ಹೊರತಾಗಿಯೂ ಕುಟುಂಬದ ಹಂತದಲ್ಲಿ ಮಹಿಳೆಯರ ಬಗ್ಗೆ ಗೌರವ ನೀಡುವ ಬಗ್ಗೆ ಅರಿವು ಮೂಡಿಸಿದರೆ ಸಮಾಜದಲ್ಲಿ ದೌರ್ಜನ್ಯ ಅತ್ಯಾಚಾರದಂತಹ ಅಹಿತಕರ ಘಟನೆಗಳು ನಡೆಯುವುದಿಲ್ಲ.
ಗಂಡ- ಹೆಂಡತಿ ನಡುವೆ ಪರಸ್ಪರ ಗೌರವ, ನಂಬಿಕೆ, ಇದ್ದರೆ ದೌರ್ಜನ್ಯದಂತಹ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ. ಮಹಿಳೆಯರೇ ಆಗಲಿ ಪುರುಷರೇ ಆಗಲಿ ಕುಟುಂಬದಲ್ಲಿ ಅಧಿಕಾರ ಚಲಾಯಿಸಲು ಹೋಗಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ತಮ್ಮಯ್ಯ, ಅಪರ ಜಿಲ್ಲಾಧಿಕಾರಿ ಶಾಂತಲಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಹಿರಿಯ ವಕೀಲರಾದ ಎಂ.ಬಿ. ಗಿರಿಜಾಂಬಿಕಾ ಇತರರು ಉಪಸ್ಥಿತರಿದ್ದರು.