ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನ’ವನ್ನು ಮಹಿಳಾ ಉದ್ಯಮಿಗಳು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಪ್ರಮೀಳಾ ಮೊರಕರ, ಗೀತಾ ಕಂಕನವಾಡಿ, ಸಿದ್ದನಗೌಡ, ರಾಜೇಶ್ವರಿ ದೇವಲಾಪುರ ಇತರರಿದ್ದರು. 
ಜಿಲ್ಲೆ

ಕುಟುಂಬ ನಿರ್ವಹಣೆಯಲ್ಲಿ ಸ್ತ್ರೀ ನಿಪುಣೆ

ಬೆಳಗಾವಿ: ಹೆಣ್ಣು ಸಂಸಾರದ ಕಣ್ಣು. ಕೌಟುಂಬಿಕ ನಿರ್ವಹಣೆ ಜತೆಗೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಬಲ್ಲಳು ಎಂದು ಉದ್ಯಮಿ ಪ್ರಮೀಳಾ ಮೊರಕರ ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಮಹಿಳೆಯರಲ್ಲಿ ಸ್ವಾವಲಂಬಿಯಾಗಿ ಬದುಕುವ ಸಾಮರ್ಥ್ಯ ಇದೆ. ಮಹಿಳೆಯರು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.

ಇನ್ನೋರ್ವ ಉದ್ಯಮಿ ಗೀತಾ ಕಂಕನವಾಡಿ ಮಾತನಾಡಿ, ನಾವು ಕೈಗೊಂಡ ಕಾಯಕವನ್ನು ಯಶಸ್ವಿಯಾಗಿ ನಡೆಸುತ್ತೇವೆಂದು ಪಣತೊಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಶತ ಪ್ರಯತ್ನದಿಂದ ನಾವು ಯಶಸ್ಸುಗಳಿಸಲು ಸಾಧ್ಯ. ಮಹಿಳೆಯರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಸಹಾಯದಿಂದ ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ ಎಂದರು. ಸಂಸ್ಥೆಯ ನಿರ್ದೇಶಕ ಸಿದ್ದನಗೌಡ ಮಾತನಾಡಿ, ಮಹಿಳೆಯರಿಗೆ ಪ್ರಸ್ತುತ ದಿನಗಳಲ್ಲಿ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡರೆ ಸ್ವಾಲಂಬಿಗಳಾಗಬಹುದು. ಜತೆಗೆ ಇತರರನ್ನು ಸಹ ಸ್ವಾವಲಂಬಿಗಳನ್ನಾಗಿ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದರು.

ಕೇಕ್ ಕತ್ತರಿಸುವುದರ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಇದೇ ವೇಳೆ ಆಯೋಜಿಸಿದ್ದ ಮ್ಯೂಸಿಕಲ್‌ಚೇರ್, ರಂಗೋಲಿ ಮತ್ತು ಲಿಂಬು ಚಮಚ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಶಸ್ವಿ ಉದ್ಯಮಿಗಳಿಗೂ ಸತ್ಕರಿಸಲಾಯಿತು. ಬಸವರಾಜ ಕುಬಸದ, ಅಬ್ದುಲ್ ರಜಾಕ ವೇದಿಕೆಯಲ್ಲಿದ್ದರು. ರಾಜೇಶ್ವರಿ ದೇವಲಾಪುರ ನಿರೂಪಿಸಿದರು. ವೀರಭದ್ರಗೌಡ ಹೊಳೆಯಾಚಿ ಸ್ವಾಗತಿಸಿದರು.