ನೆಲಮಂಗಲ: ಕೋಳಿ ಸಾಗಾಟ ಮತ್ತು ಮಾರಾಟ ಮಾಡುವವರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಶು ಸಂಗೋಪನೆ ಇಲಾಖೆ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಡಾ.ಜಿ.ಎಂ.ನಾಗರಾಜ ತಿಳಿಸಿದರು.
ನಗರದ ಪಶುಸಂಗೋಪನೆ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಅರಿವು ಕಾರ್ಯಕ್ರಮದಡಿ ಕೋಳಿ ಸಂಸ್ಕರಣಾ ಉತ್ಪನ್ನಗಳ ಕುರಿತ ಅರಿವು ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಗಳ ಅತಿಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಜಾರಿಗೆ ತಂದಿದೆ. ಹೊಸ ಉದ್ದಿಮೆಯನ್ನು ಆರಂಭಿಸುವ ಉದ್ಯಮಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 70 ಕೋಳಿ ಸಂಸ್ಕರಣ ಉತ್ಪನ್ನ ಘಟಕ ಆರಂಭ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಸುಮಾರು 1 ಕೋಟಿ ರೂ.ವರೆಗೂ ಸರ್ಕಾರ ನೆರವು ನೀಡುತ್ತಿದ್ದು, ಸುಮಾರು 10 ಲಕ್ಷ ರೂ.ವರೆಗೂ ಸಬ್ಸಿಡಿ ಲಭ್ಯವಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 23 ಮಂದಿ ಅರ್ಜಿ ಸಲ್ಲಿಸಿದ್ದು, 5 ಮಂದಿಗೆ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದರು.
ಕೋಳಿ ಸಂಸ್ಕರಣಾ ಉತ್ಪನ್ನಗಳ ಘಟಕವನ್ನು ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಸಾಕಷ್ಟು ಅಸಕ್ತಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ತ್ಯಾಮಗೊಂಡ್ಲು ಪಶು ಆಸ್ಪತ್ರೆ ಆವರಣದಲ್ಲಿ ಸುಮಾರು 2.70ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕೋಳಿ ಸಂಸ್ಕರಣಾ ಉತ್ಪನ್ನಗಳ ಘಟಕವನ್ನು ನಿರ್ಮಾಣ ಮಾಡಲು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಶು ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಎಚ್.ಸಿದ್ದಪ್ಪ ಮಾತನಾಡಿ, ತಾಲೂಕಿನಾದ್ಯಂತ 200ಕ್ಕೂ ಹೆಚ್ಚುಮಂದಿ ಕೋಳಿ ಸಾಗಣೆ ಮಾಡುತ್ತಿದ್ದು, ಉದ್ಯಮ ನಂಬಿ ಸಾಕಷ್ಟು ಮಂದಿ ಜೀವನ ನಡೆಸುತ್ತಿದ್ದು, ಯೋಜನೆಯ ಅನುಕೂಲ ಪಡೆದುಕೊಳ್ಳಬೇಕು ಎಂದರು.
ಪಶುವೈದ್ಯಾಧಿಕಾರಿ ಮೋಹನ್‌ಕುಮಾರ್, ಶಿವಪ್ರಸಾದ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.